ಬೆಂಗಳೂರು/ ಉಡುಪಿ:ಉಡುಪಿ ಕಾಲೇಜು ವಿಡಿಯೋ ಪ್ರಕರಣವನ್ನು ಸಿಐಡಿಗೆ ಕೊಟ್ಟು ಕೂಲಂಕಷ ತನಿಖೆ ಮಾಡಿಸಿ ಇದರ ಆರೋಪಿತರ ಸಮಗ್ರ ತನಿಖೆ ನಡೆಸಬೇಕು. ಇದರ ಹಿಂದೆ ಇರುವ ಜಾಲದ ಕುರಿತು ಪರಿಶೀಲಿಸಬೇಕಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ನಗರದ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಖಾಸಗಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ಮೊಬೈಲ್ ಮೂಲಕ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತು ಜಿಲ್ಲಾಡಳಿತದ ಕೈಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಟ್ಟಿಹಾಕಿದೆ. ಸಿಐಡಿ ತನಿಖೆ ಅಥವಾ ಡಿಐಜಿ ಮಟ್ಟದ ಮಹಿಳಾ ಪೊಲೀಸ್ ಅಧಿಕಾರಿಯಿಂದ ತನಿಖೆ ಮಾಡಬೇಕಿತ್ತು. ಆದರೆ, ಇದನ್ನು ಮುಚ್ಚಿಹಾಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಈಗಾಗಲೇ ಈ ಪ್ರಕರಣ ಸಂಬಂಧ ಪ್ರತಿಭಟನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬಹಳ ದಿನಗಳ ಕಾಲ ಜನರನ್ನು ವಂಚಿಸಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸಿಐಡಿಗೆ ಕೊಟ್ಟು ಕೂಲಂಕಷ ತನಿಖೆ ಮಾಡಿಸಿ. ಇದರ ಆರೋಪಿತರ ಸಮಗ್ರ ತನಿಖೆ ನಡೆಸಬೇಕು. ಇದರ ಹಿಂದೆ ಇರುವ ಜಾಲದ ಕುರಿತು ಪರಿಶೀಲಿಸಬೇಕಿದೆ. ಹೀಗಾಗಿ ಪ್ರತ್ಯೇಕ ಸಿಐಡಿ ತಂಡ ರಚಿಸಿ ತನಿಖೆಗೆ ಆದೇಶ ಕೊಡಬೇಕು. ಆದರೆ, ಇದರ ಬದಲಾಗಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು, ಯುವಕರ ಮೇಲೆ ಕೇಸ್ ಹಾಕುವ ಕೆಟ್ಟ ಪರಂಪರೆಗೆ ನಮ್ಮ ಗೃಹ ಇಲಾಖೆ ಹೊರಟಿದೆ ಎಂದು ಟೀಕಿಸಿದರು.
ನಿಮ್ಮ ಕೈಯಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲದೇ ಇದ್ದರೆ ತನಿಖೆಯನ್ನು ಎನ್‍ಐಎಗೆ ವಹಿಸಬೇಕು. ವಿಡಿಯೋ ಮಾಡಿದ್ದು ಹೇಯ ಘಟನೆ ಇಡೀ ರಾಜ್ಯ ಮತ್ತು ದೇಶದ ನಾಗರಿಕರು ತಲೆತಗ್ಗಿಸುವಂಥದ್ದು, ಅಲ್ಲಿನ ವಿದ್ಯಾರ್ಥಿನಿಯರು ಬಹಿರಂಗವಾಗಿ ಮಾಧ್ಯಮದ ಮೂಲಕ ಹೇಳಿಕೆ ಕೊಡುತ್ತಿದ್ದಾರೆ. ಇಂಥ ಘಟನೆಗಳು ಆರೇಳು ತಿಂಗಳುಗಳಿಂದ ನಡೆಯುತ್ತಿದ್ದು, ನಾವು ಆತಂಕದಿಂದಿದ್ದೇವೆ. ಮುಂದಿನ ದಿನಗಳಲ್ಲಿ ಎಂಥ ಚಿತ್ರಗಳು ಹೊರಬರಬಹುದೆಂಬ ಭೀತಿ, ಆತಂಕ ನಮಗಿದೆ ಅನ್ನುವ ಮಾತುಗಳನ್ನು ವಿದ್ಯಾರ್ಥಿನಿಯರು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ಅವರು ವಿವರಿಸಿದರು.
ಘಟನೆ ನಡೆದು ನಾಲ್ಕೈದು ದಿನಗಳವರೆಗೆ ಎಫ್‍ಐಆರ್ ದಾಖಲಿಸದೇ ಇರುವುದು ದುರದೃಷ್ಟಕರ. ವಿದ್ಯಾರ್ಥಿನಿಯರು ಬೀದಿಗೆ ಬಂದು ಪ್ರತಿಭಟಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಮೊಬೈಲ್‍ಗಳನ್ನು ಯಾರೋ ಒಯ್ದು ಬದಲಿಸಿ ಕೊಡುತ್ತಿದ್ದರು ಎಂಬ ಮಾಹಿತಿಯನ್ನೂ ವಿದ್ಯಾರ್ಥಿನಿಯರು ನೀಡಿದ್ದಾರೆ. ಇದು ಹಲವು ಸಂಶಯಗಳು ಮೂಡುವಂತೆ ಮಾಡಿದೆ. ನಾಗರಿಕ ಸಮಾಜ ತಲೆತಗ್ಗಿಸುವ ಮತ್ತು ಕೆಟ್ಟ ಪರಂಪರೆಯ ಆರೋಪ ಇದಾಗಿದ್ದು, ತಕ್ಷಣ ಇದರ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ: ಮತ್ತೊಂದೆಡೆ, ಈ ವಿಡಿಯೋ ವಿವಾದ ಘಟನೆಯನ್ನು ಖಂಡಿಸಿ ಉಡುಪಿಯಲ್ಲಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬಿಜೆಪಿ ಶುಕ್ರವಾರ ಪ್ರತಿಭಟನೆ ನಡೆಸಿದೆ. ಕೇಂದ್ರೀಯ ತನಿಖಾ ಸಂಸ್ಥೆಯಿಂದ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಈ ಘಟನೆ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ನಾವು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸಿಎಂ, ಕುಟುಂಬ ಸದಸ್ಯರ ಅವಹೇಳನ ಆರೋಪ: ಬಿಜೆಪಿ ಕಾರ್ಯಕರ್ತೆ ಬಂಧನ