ಕರ್ನಾಟಕ

karnataka

ETV Bharat / state

ನೂತನ ಸ್ಪೀಕರ್‌ ಯು.ಟಿ.ಖಾದರ್ ಅಭಿನಂದಿಸಿ ಶಾಸಕರಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ

ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ಇದೇ ವೇಳೆ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಕೆಲವು ಸೂಚನೆಗಳನ್ನು ನೀಡಿದ್ದಾರೆ.

cm siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : May 24, 2023, 12:18 PM IST

ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಯ ಕೊನೆಯ ದಿನವಾದ ಇಂದು 16ನೇ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ, ಶುಭ ಹಾರೈಸಿದರು. ಇದೇ ವೇಳೆ, ಸಭೆಯಲ್ಲಿ ಹೊಸ ಶಾಸಕರುಗಳಿಗೆ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಕೆಲವು ಸೂಚನೆಗಳನ್ನೂ ನೀಡಿದ್ದು, ಅವು ಈ ಕೆಳಗಿನಂತಿವೆ.

  1. ರಾಜ್ಯದ ಜನತೆ ಅಪಾರ ನಿರೀಕ್ಷೆಗಳ ಜತೆಗೆ ನಮಗೆ ಅಪಾರ ಬಹುಮತದ ಮೂಲಕ ಜವಾಬ್ದಾರಿ ವಹಿಸಿದ್ದಾರೆ. 5 ವರ್ಷಗಳ ಕಾಲ ಅಭಿವೃದ್ಧಿ ಕಡೆಗೆ ಗಮನ ಹರಿಸಿ, ನಿಮ್ಮ ಕ್ಷೇತ್ರಗಳ ಜನರ ನಿರೀಕ್ಷೆ ಈಡೇರಿಸಿ.
  2. ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹೆಚ್ಚು ಕ್ರಿಯಾಶೀಲತೆಯಿಂದ ಭಾಗವಹಿಸಿ.
  3. ಬಿಜೆಪಿಯವರು ಮಾಡುವ ಸುಳ್ಳು ಆಪಾದನೆಗಳನ್ನು ಯಶಸ್ವಿಯಾಗಿ ಎದುರಿಸಲು ಎಲ್ಲ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು.
  4. ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯ ಆಗಿದೆ. ತೆರಿಗೆ ಪಾಲಿನಲ್ಲೂ ಅನ್ಯಾಯ ಆಗಿದೆ.
  5. ನಮ್ಮ ನಾಡಿನ‌ ಜನತೆ ಕಟ್ಟುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ನಾವು ಕ್ರಿಯಾಶೀಲವಾಗಿ ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ನಾವು ಪಡೆದುಕೊಳ್ಳಬೇಕು.
  6. ಕೇಂದ್ರದಿಂದ ರಾಜ್ಯಕ್ಕೆ, ನಾಡಿನ ಜನತೆಗೆ ಅನ್ಯಾಯ ಆಗುತ್ತಿದ್ದರೂ ರಾಜ್ಯದಿಂದ ಆಯ್ಕೆ ಆದ ಸಂಸದರು ನಾಲ್ಕೂವರೆ ವರ್ಷಗಳ ಕಾಲ ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಕೋವಿಡ್ 19 ವೈರಸ್​, ಪ್ರವಾಹದ ಸಂದರ್ಭದಲ್ಲೂ ಈ ಸಂಸದರು ರಾಜ್ಯದ ಪರವಾಗಿ ಕೇಂದ್ರದ ಮುಂದೆ ಬಾಯಿ ಬಿಡಲಿಲ್ಲ. ಹೀಗಾಗಿ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಸರಿಯಾದ ಉತ್ತರ ಕೊಡಬೇಕು.
  7. ಮುಂದೆ ಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಇದನ್ನೂ ಓದಿ :ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಾಸಕ ಯು ಟಿ ಖಾದರ್​.. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಾಥ್

ಸಹ ಸದಸ್ಯತ್ವ ಸ್ವೀಕಾರ :ಇದೇ ವೇಳೆ ಹರಪನಹಳ್ಳಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧಿಸಿ ಜಯ ಗಳಿಸಿರುವ ಲತಾ ಮಲ್ಲಿಕಾರ್ಜುನ್ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತಿಸಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದರು.

ಇದನ್ನೂ ಓದಿ :ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್: ಕರಾವಳಿ ರಾಜಕಾರಣಿಯ ರಾಜಕೀಯ ಹಾದಿ..

ಇನ್ನೊಂದೆಡೆ, ಹೊಸ ಸರ್ಕಾರದ ಮೊದಲ ವಿಧಾನಸಭೆ ಅಧಿವೇಶನಕ್ಕೆ ಇಂದು ಕೊನೆಯ ದಿನವಾಗಿದೆ. ಕಳೆದ ಎರಡು ದಿನ ನೂತನ ಶಾಸಕರು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ್ದಾರೆ. ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 135 ಸ್ಥಾನಗಳನ್ನು ಗೆದ್ದು ಭಾರಿ ಬಹುಮತದಿಂದ ಅಧಿಕಾರದ ಗದ್ದುಗೆ ಏರಿದೆ.

ABOUT THE AUTHOR

...view details