ಬೆಂಗಳೂರು: ಚಿನ್ನ ಖರೀದಿಸಿ ವಾಪಸ್ ಆಗುತ್ತಿದ್ದವರನ್ನು ಬೆದರಿಸಿ 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಕಸಿದು ಪರಾರಿಯಾಗಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ರೈಲ್ವೆ ಪೊಲೀಸ್ ಸಿಬ್ಬಂದಿ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಸಹಿತ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ರೈಲ್ವೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಮೌನೇಶ್, ಸಿದ್ದಪ್ಪ ಹಾಗೂ ರಾಯಚೂರು ಮೂಲದ ಮೌನೇಶ್ ಬಂಧಿತ ಆರೋಪಿಗಳು.
ರಾಯಚೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ, ಅಂಗಡಿ ಮಾಲೀಕರ ಸೂಚನೆಯಂತೆ ಬೆಂಗಳೂರಿಗೆ ಬಂದು ಚಿನ್ನ ಖರೀದಿ ಮಾಡಿದ್ದರು. ಮಾರ್ಚ್ 11ರಂದು ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ವಾಪಸ್ ರಾಯಚೂರಿಗೆ ತೆರಳಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಬಂದ ಆರೋಪಿಗಳು, ತಾವು ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. 'ಮೂರು ತಿಂಗಳಿನಿಂದ ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ' ಎಂದು ಬೆದರಿಸಿ, ಚಿನ್ನದ ಗಟ್ಟಿಗಳು, ಅಭರಣದ ಬ್ಯಾಗ್ ಕಸಿದುಕೊಂಡಿದ್ದರು. ಬಳಿಕ ಆಟೋರಿಕ್ಷಾ ಕರೆದು ಇಬ್ಬರನ್ನೂ ಕೂರಿಸಿಕೊಂಡು ರೇಸ್‌ಕೋರ್ಸ್ ರಸ್ತೆಯಲ್ಲಿ ಇಬ್ಬರನ್ನೂ ಇಳಿಸಿ ಡಿಸಿಪಿ ಕಚೇರಿಗೆ ಬರುವಂತೆ ಸೂಚನೆ ನೀಡಿ ಪರಾರಿಯಾಗಿದ್ದರು.
ಘಟನೆಯ ಕುರಿತು ಪ್ರಕರಣದ ದಾಖಲಿಸಿಕೊಂಡ ಉಪ್ಪಾರಪೇಟೆ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಸೂಚನೆಯಂತೆ, ಉಪ್ಪಾರ ಪೇಟೆ ಠಾಣೆಗೆ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ತೆರಳಿ ವಿಚಾರಿಸಿದಾಗ ಆರೋಪಿಗಳು ಉಪ್ಪಾರಪೇಟೆ ಠಾಣೆಯ ಸಿಬ್ಬಂದಿಯಲ್ಲ ಎಂಬುದು ಬಯಲಾಗಿತ್ತು.