ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದಿನ ರಸ್ತೆಯಲ್ಲಿ ಇಬ್ಬರು ಕಾನ್ಸ್ಟೇಬಲ್ ಗಾಂಜಾ ಮಾರಾಟ ಪ್ರಕರಣ ಸಂಬಂಧ ಆರ್.ಟಿ.ನಗರ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪ್ರಕರಣದ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿಲ್ಲ ಎಂದು ಇನ್ಸ್ಪೆಕ್ಟರ್ ಅಶ್ವತ್ಥ್ ಗೌಡ ಹಾಗೂ ಸಬ್ ಇನ್ಸ್ಪೆಕ್ಟರ್ ವೀರಭದ್ರಯ್ಯ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಜನವರಿ 13ರಂದು ಸಿಎಂ ಮನೆ ಮುಂದೆ ಭದ್ರತೆಗೆ ನಿಯೋಜನೆಯಾಗಿದ್ದ ಕೋರಮಂಗಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಸಂತೋಷ್ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿತ್ತು. ಆರ್.ಟಿ.ನಗರದ 80ನೇ ಅಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಆರೋಪದಡಿ ಈ ಇಬ್ಬರು ಕಾನ್ಸ್ಟೇಬಲ್ಗಳು ಸೇರಿ ಐವರ ಬಂಧನವಾಗಿತ್ತು.
ಬಂಧಿತರಾಗಿದ್ದ ಕಾನ್ಸ್ಟೇಬಲ್ಗಳು ಡ್ರಗ್ಸ್ ಡೀಲ್ಲ್ನಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯ ಪೂರ್ವಾಪರ ಪರಿಶೀಲಿಸದೆ ಸಿಎಂ ನಿವಾಸಕ್ಕೆ ನಿಯೋಜಿಸಿದ್ದ ಕಾರಣ ಆಗ್ನೇಯ ವಲಯ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಸಿಎಂ ನಿವಾಸದ ಭದ್ರತೆ ಮತ್ತು ನಿಯೋಜಿತ ಸಿಬ್ಬಂದಿ ಮೇಲೆ ನಿಗಾ ಇರಿಸುವುದು ಹಾಗೂ ಸರಿಯಾದ ರೀತಿ ಭದ್ರತೆ ನೀಡದ ಕಾರಣ ವಿಐಪಿ ಡಿಸಿಪಿ ಮಂಜುನಾಥ್ ಬಾಬು ಅವರಿಗೂ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಮೆಮೊ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ನೀರಿನ ಸಂಪ್ ಸ್ವಚ್ಛಗೊಳಿಸುವಾಗ ದುರಂತ.. ಬೆಂಗಳೂರಲ್ಲಿ ತಂದೆ-ಮಗ ದಾರುಣ ಸಾವು