ಬೆಂಗಳೂರು:ಅಮೆರಿಕದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವೊಂದಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಸುಳ್ಳು ಹೇಳಿಕೊಂಡು, ಅವರ ಫೋಟೊ ಬಳಸಿ ವಂಚಿಸಿದ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸುಧಾ ಮೂರ್ತಿಯವರ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಮಮತಾ ಸಂಜಯ್ ಎಂಬವರು ನೀಡಿದ ದೂರಿನನ್ವಯ ಲಾವಣ್ಯ ಹಾಗೂ ಶೃತಿ ಎಂಬಿಬ್ಬರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:ಅಮೆರಿಕದಲ್ಲಿ ಕನ್ನಡ ಕೂಟ ಆಫ್ ನಾರ್ತನ್ ಕ್ಯಾಲಿಫೋರ್ನಿಯಾ (KKNC) ಕಳೆದ ಏಪ್ರಿಲ್‌ನಲ್ಲಿ ಆಯೋಜಿಸಿದ್ದ 50ನೇ ವಾರ್ಷಿಕೋತ್ಸವಕ್ಕೆ ಸುಧಾಮೂರ್ತಿ ಅವರನ್ನು ಇ-ಮೇಲ್ ಮೂಲಕ ಆಹ್ವಾನಿಸಲಾಗಿತ್ತು. ಆದರೆ ಆ ದಿನಾಂಕದಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ಸುಧಾಮೂರ್ತಿಯವರು ಇ-ಮೇಲ್ ಮೂಲಕ ತಿಳಿಸಿದ್ದರು. ಆದರೆ ಸುಧಾ ಮೂರ್ತಿಯವರು ಅಮೆರಿಕಕ್ಕೆ ಆಗಮಿಸಲಿದ್ದು, ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ.ಸುಧಾ ಮೂರ್ತಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರುತಿ ಹಾಗೂ ಲಾವಣ್ಯ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರು ಆರೋಪಿಗಳು, ಒಂದು ಟಿಕೆಟ್‌ಗೆ 40 ಡಾಲರ್ ರೂನಂತೆ ಪಡೆದು ಜನರನ್ನು ವಂಚಿಸಿದ್ದಾರೆ. ಇದಕ್ಕಾಗಿ ಸುಧಾಮೂರ್ತಿ ಕಚೇರಿ ಹೆಸರಿನಲ್ಲಿ, ಸುಧಾ ಮೂರ್ತಿ ಅವರ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆಯ 66C, 66D ಹಾಗೂ ಐಪಿಸಿ ಸೆಕ್ಷನ್ 419, 420 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೀಟ್ ಆ್ಯಂಡ್ ಗ್ರೀಟ್ ವಿತ್ ಸುಧಾಮೂರ್ತಿ ಕಾರ್ಯಕ್ರಮ ಆಯೋಜಿಸಿಲಾಗಿದ್ದು, ಸುಧಾ ಮೂರ್ತಿ ಮುಖ್ಯ ಅತಿಥಿಗಳಾಗಿದ್ದಾರೆ ಎಂದು ಜಾಹೀರಾತುಗಳು ಮಾಡಿ, ಪ್ರತಿ ಟಿಕೆಟ್‌ಗೆ 40 ಡಾಲರ್ನಂತೆ ಮಾರಾಟ ಮಾಡಿದ್ದಾರೆ. ಶೃತಿ ಅಪರಿಚಿತರಿಂದ ಈ ಟಿಕೆಟ್ಗಳನ್ನು ಮಾಡಿಸಿ ಹಣ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದಾರೆ. ಹಾಗೆಯೇ ಲಾವಣ್ಯ ಎಂಬವರು ತಾನು ದಿ ಮೂರ್ತಿ ಟ್ರಸ್ಟ್ ಕಚೇರಿಯ ಸಿಬ್ಬಂದಿ ಎಂದು ಸುಳ್ಳು ಹೇಳಿ, ಸುಧಾ ಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಧಾಮೂರ್ತಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು: 670 ಕೇಸ್ ದಾಖಲು, ₹3.36 ಲಕ್ಷ ದಂಡ ವಸೂಲಿ