ಬೆಂಗಳೂರು:ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ 1994 ರಿಂದ ಸಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ದಿವಂಗತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ಅವರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಸಮರ್ಪಕವಾಗಿ ಇತ್ಯರ್ಥ ಗೊಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ನ ಕೋರ್ಟ್ ಹಾಲ್-1ರಲ್ಲಿ ಹಮ್ಮಿಕೊಂಡಿದ್ದ ದಿವಂಗತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಎಚ್.ಎನ್. ನಾರಾಯಣ ಅವರಿಗೆ ನ್ಯಾಯಾಂಗದ ಅರಿವು ಅಪಾರವಾಗಿತ್ತು ಎಂದು ತಿಳಿಸಿದರು.
ನ್ಯಾ. ನಾರಾಯಣ ಅವರ ಮುಖಂಡತ್ವದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯ ಅನುವಾದನ ಕುರಿತ ವರದಿ ಸಲ್ಲಿಸಲು ಸಮಿತಿ ರಚಿಸಿದ್ದು, ಈ ವರದಿಯನ್ನು ಪೂರ್ಣ ಪೀಠ ಅಂಗೀಕರಿಸಿದ್ದು ವಿಶೇಷವಾಗಿತ್ತು ಎಂದರು. ದಿವಂಗತ ಎಚ್.ಎನ್ ನಾರಾಯಣ ಅವರು ತುಮಕೂರು ಜಿಲ್ಲೆಯ ನೆಲಮಂಗಲ ತಾಲೂಕಿನ ದೊಡ್ಡಬೆಳೆ ಗ್ರಾಮದಲ್ಲಿ 1941 ರಲ್ಲಿ ಜನಿಸಿದ್ದರು. ಇವರು ಮೈಸೂರಿನ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಮೊದಲನೆಯ ವರ್ಷದ ಕಾನೂನು ವಿದ್ಯಾಭ್ಯಾಸವನ್ನು ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಪೂರೈಸಿ, ತುಮಕೂರಿನ ವಿದ್ಯೋದಯ ಮಹಾ ವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡರು.