ಬೆಂಗಳೂರು: ನಗರದಲ್ಲಿ ಮೆಟ್ರೋ ರೈಲು ಯೋಜನೆಗಾಗಿ ಮರಗಳನ್ನು ಕತ್ತರಿಸುವ ಮತ್ತು ಸ್ಥಳಾಂತರಿಸುವ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ತಜ್ಞರ ಸಮಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಹೊಸ ಸಮಿತಿ ನೇಮಕ ಮಾಡುವ ಇಂಗಿತ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ನಿರಂತರವಾಗಿ ಕಡಿಯುತ್ತಿರುವುದನ್ನು ಪ್ರಶ್ನಿಸಿ ಎನ್ವಿರಾನ್‍ಮೆಂಟ್ ಟ್ರಸ್ಟ್ ಮತ್ತು ದತ್ತಾತ್ರೇಯ ಟಿ. ದೇವರೆ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ತಜ್ಞರ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಹಿಂದೆ ಮರ ಪ್ರಾಧಿಕಾರ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ತಜ್ಞರ ಸಮಿತಿ ನೇಮಕ ಮಾಡಲಾಯಿತು. ಈಗಿನ ಬೆಳವಣಿಗಳನ್ನು ಗಮನಿಸಿದರೆ ತಜ್ಞರ ಸಮಿತಿ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮರಗಳನ್ನು ಕತ್ತರಿಸುವ ಹಾಗೂ ಸ್ಥಳಾಂತರಿಸುವ ವಿಚಾರದಲ್ಲಿ ಸಮಿತಿ ವಿವೇಚನೆ ಬಳಸುತ್ತಿಲ್ಲ. ಹೀಗಾಗಿ ಮೂರನೇ ತಜ್ಞರ ಸಮಿತಿ ನೇಮಕ ಮಾಡುವ ಅವಶ್ಯಕತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟ ಪೀಠ, ಜುಲೈ 2ರೊಳಗೆ ತಜ್ಞರ ಸಮಿತಿಗೆ ಹೆಸರು ಸೂಚಿಸುವಂತೆ ಸರ್ಕಾರ ಮತ್ತು ಬಿಎಂಆರ್ಸಿಎಲ್ಗೆ ನಿರ್ದೇಶನ ನೀಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್ ವಾದಿಸಿ, ಮರಗಳನ್ನು ಕತ್ತರಿಸುವ ಮತ್ತು ಸ್ಥಳಾಂತರಿಸುವ ಕುರಿತು ಮರ ಪ್ರಾಧಿಕಾರದ ಅಧಿಕಾರಿ ನೀಡಿದ್ದ ಅನುಮತಿಗೆ ಆಕ್ಷೇಪ ವ್ಯಕ್ತಪಡಿಸಿ ಜೂ. 7ರಂದು ಬಿಎಂಆರ್ಸಿಎಲ್ಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿದರೂ, ಅರ್ಜಿಯ ವಿಚಾರಣೆ ಜೂ. 10ಕ್ಕೆ ನಿಗದಿಯಾಗಿದ್ದರೂ ಬಿಎಂಆರ್ಸಿಎಲ್ ರಾತ್ರೋರಾತ್ರಿ 161 ಮರಗಳನ್ನು ಕತ್ತರಿಸಿದೆ ಎಂದು ಆರೋಪಿಸಿದರು.
ಇದನ್ನು ಅಲ್ಲಗಳೆದ ಬಿಎಂಆರ್ಸಿಎಲ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಉದಯ ಹೊಳ್ಳ, ಮರ ಕತ್ತರಿಸುವ ಸಂಬಂಧ ಮರ ಪ್ರಾಧಿಕಾರ ಅಧಿಕಾರಿಯ ಅನುಮತಿಗೆ ತಡೆ ಇರಲಿಲ್ಲ. ಅಷ್ಟಕ್ಕೂ ಅರ್ಜಿದಾರರ ಆಕ್ಷೇಪದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವಿಚಾರವನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಬಿಎಂಆರ್ಸಿಎಲ್ ತನ್ನ ಕೆಲಸ ಮುಂದುವರಿಸಿತು. ಜೂ. 8 ಮತ್ತು 9ರಂದು 55 ಮರಗಳನ್ನು ಸ್ಥಳಾಂತರಿಸಲಾಗಿದ್ದು, 4 ಮರಗಳನ್ನಷ್ಟೇ ಕತ್ತರಿಸಲಾಗಿದೆ ಎಂದರು. ಈ ಬಗ್ಗೆ ಬಿಎಂಆರ್ಸಿಎಲ್ಗೆ ಕಳಿಸಲಾಗಿರುವ ಇ-ಮೇಲ್‍ಗಳ ವಿವರ ನೀಡುವಂತೆ ಸೂಚಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.