ಬೆಂಗಳೂರು :ಮುಷ್ಕರನಿರತ ಸಾರಿಗೆ ನೌಕರರಿಗೆ ತಿಳಿವಳಿಕೆ ನೀಡಿ ಅವರನ್ನು ತಕ್ಷಣ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸುವುದನ್ನು ಬಿಟ್ಟು ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾಂಗ್ರೆಸ್ ಮುಖಂಡರು ನಮ್ಮ ಸರ್ಕಾರದ ಮೇಲೆಯೇ ಗೂಬೆ ಕೂರಿಸುತ್ತಾ ರಾಜಕೀಯ ಲಾಭಗಳಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮ ಹೇಳಿಕೆ ನೀಡಿರುವ ಡಿಸಿಎಂ, 6ನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೆ ಅನ್ವಯಿಸಬೇಕು ಎಂದು ಈಗ ಮೊಸಳೆ ಕಣ್ಣೀರು ಸುರಿಸುವ ವಿರೋಧ ಪಕ್ಷಗಳು, ಹಿಂದೆ ತಾವೇ ಅಧಿಕಾರದಲ್ಲಿದ್ದಾಗ ವೇತನ ಆಯೋಗದ ಶಿಫಾರಸುಗಳಂತೆ ಎಂದಾದರೂ ನಮ್ಮ ಸಾರಿಗೆ ನೌಕರರಿಗೆ ವೇತನಗಳನ್ನು ನೀಡಿದ ಇತಿಹಾಸವಿದೆಯೇ? ಹಿಂದೆ ಹಲವು ದಶಕಗಳ ಕಾಲ ಆಡಳಿತ ನಡೆಸಿದ ಇದೇ ಪ್ರತಿಪಕ್ಷಗಳು ಎಂದಾದರೂ ಸಾರಿಗೆ ನಿಗಮಗಳ ನೌಕರರಿಗೆ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಸಂಬಳ ನೀಡಿದ ದಾಖಲೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:4ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: 118 ಬಿಎಂಟಿಸಿ ಸಿಬ್ಬಂದಿ ಕೆಲಸದಿಂದ ವಜಾ
ಕೋವಿಡ್-ಲಾಕ್ಡೌನ್ ಸಂಕಷ್ಟದಿಂದಾಗಿ ಸಾರಿಗೆ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟವಾದಾಗ ಮುಖ್ಯಮಂತ್ರಿ ಯಡಿಯೂರಪ್ಪ ಸುಮಾರು 2 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಮೊತ್ತವನ್ನು ಸರ್ಕಾರದಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದು ಒಂದು ದಾಖಲೆಯಾಗಿದೆ. ಕೇವಲ ಒಂದೇ ವರ್ಷದಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಹಿಂದೆ ಯಾವುದೇ ಸರ್ಕಾರವೂ ಸಾರಿಗೆ ನಿಗಮಗಳಿಗೆ ನೀಡಿದ ನಿದರ್ಶನಗಳಿಲ್ಲ. ಈ ಬಗ್ಗೆ ವಿರೋಧ ಪಕ್ಷದವರೇ ಅತ್ಮಾವಲೋಕನ ಮಾಡಿಕೊಂಡು ಮಾತನಾಡಿದರೆ ಒಳ್ಳೆಯದು. ಸಾರಿಗೆಯಂತಹ ಸಾರ್ವಜನಿಕ ಹಿತದೃಷ್ಟಿಯ ವಿಷಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಸಾರಿಗೆ ನೌಕರರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದರೂ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಸಾರಿಗೆ ನೌಕರ ಬಾಂಧವರು ಮುಷ್ಕರದ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಈ ಮುಷ್ಕರವನ್ನು ತಪ್ಪಿಸಲು ಸಾರಿಗೆ ನೌಕರ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಾವು ನಡೆಸಿದ್ದರೂ ಸಹ ಈ “ಕೈ”ವಾಡದಿಂದ ಮುಷ್ಕರ ನಡೆದು ಅಮಾಯಕ ಜನರು ತೀವ್ರ ತೊಂದರೆ ಎದುರಿಸುವಂತಾಯಿತು. ಇಂತಹ ದುರಿತದ ಕಾಲದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಮ್ಮ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪ್ರತಿಪಕ್ಷಗಳು ಕೈಜೋಡಿಸುವುದನ್ನು ಬಿಟ್ಟು ವಿನಾ ಕಾರಣ ರಾಜಕೀಯ ಪ್ರಚೋದನೆ ನೀಡುವ ಹೇಳಿಕೆಯಲ್ಲೇ ಕಾಲಕಳೆಯುತ್ತಿರುವುದು ಬೇಸರದ ಸಂಗತಿ. ಈ ಎಲ್ಲಾ ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವ ಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದು ನನ್ನ ನಂಬಿಕೆ ಎಂದು ಟೀಕಿಸಿದ್ದಾರೆ.