ಬೆಂಗಳೂರು:ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮೇಲೆ ಹಲ್ಲೆ ನಡೆಸಿ, ಎಳೆದೊಯ್ದು ಕೂಡಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠವು ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠಕ್ಕೆ ವರ್ಗಾಯಿಸಿದೆ.
ಶಾಸಕರಿಗೇ ರಕ್ಷಣೆ ಇಲ್ಲವೆಂದಾದ್ರೆ, ಸಾಮಾನ್ಯರ ಕಥೆ ಏನು?: ಹೈಕೋರ್ಟ್ ಏಕ ಸದಸ್ಯ ಪೀಠ - ವಿಭಾಗೀಯ ಪೀಠಕ್ಕೆ ವರ್ಗಾವಣೆ
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮೇಲೆ ಹಲ್ಲೆ ಪ್ರಕರಣದ ವಿಚಾರಣೆ. ಶಾಸಕರಿಗೆ ರಕ್ಷಣೆ ಇಲ್ಲವೆಂದಾದ್ರೆ, ಸಾಮಾನ್ಯರ ಖತೆ ಏನು? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು.
ಅಮೃತೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಪೀಠದಲ್ಲಿ ನಡೆಯಿತು. ಈ ವೇಳೆ ನ್ಯಾಯಮೂರ್ತಿಗಳು, ಒಬ್ಬ ಶಾಸಕರಿಗೆ ರಕ್ಷಣೆ ಇಲ್ಲವೆಂದಾದರೆ ಜನಸಾಮಾನ್ಯರ ಕಥೆ ಏನು? ಶಾಸಕರ ಮೇಲೆ ಹಲ್ಲೆ ಮಾಡಿರುವುದು ಗಂಭೀರ ವಿಚಾರವಾಗಿದ್ದು, ಜನರ ರಕ್ಷಣೆಯ ವಿಚಾರವೂ ಆಗಿದೆ. ಹೀಗಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ತೆರಳಿದಾಗ ಶಾಸಕ ಸುಧಾಕರ್ ಮೇಲೆ ಮಾಜಿ ಸಚಿವ ಜಾರ್ಜ್ ಹಾಗೂ ಕಾಂಗ್ರೆಸ್ ಕೆಲ ನಾಯಕರು ಹಲ್ಲೆ ಮಾಡಿದ್ದರು. ಹಲ್ಲೆಯಾದ ಸಂದರ್ಭದಲ್ಲಿ ಪೊಲೀಸರು ಸುಧಾಕರ್ ಸುತ್ತಲೂ ನೆರೆದಿದ್ದರು. ಅಲ್ಲದೇ, ಸುಧಾಕರ್ ಅವರನ್ನು ಒತ್ತಾಯ ಪೂರ್ವಕವಾಗಿ ಮಾಜಿ ಸಚಿವ ಜಾರ್ಜ್ ಕೊಠಡಿಯಲ್ಲಿ ಕಾಂಗ್ರೆಸ್ ನಾಯಕರು ಬಂಧನ ಮಾಡಿದ್ದರು.ನಂತರ ಘಟನೆ ಬಗ್ಗೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿದಾಗ ಅವರು ಕೇಸ್ ದಾಖಲು ಮಾಡದೇ ಪ್ರಥಮ ವರ್ತಮಾನ ವರದಿಯನ್ನೂ ಸಿದ್ದಪಡಿಸದೇ ಕಾನೂನು ಚೌಕಟ್ಟನ್ನು ಮೀರಿ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಕೂಡಲೇ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸುವಂತೆ ನೋಟಿಸ್ ನೀಡಿ ಎಂದು ಅರ್ಜಿದಾರರು ಕೋರಿದ್ದರು. ಸದ್ಯ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.