ಬೆಂಗಳೂರು:ಇಂದು ನವದೆಹಲಿಗೆ ತೆರಳುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ವರಿಷ್ಠರನ್ನು ಭೇಟಿ ಮಾಡಿ ಖಾತೆಗಳ ಹಂಚಿಕೆ ಅಂತಿಮಗೊಳಿಸಲಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸಮಸ್ಯೆಗಳನ್ನು ಹೊತ್ತು ಬಂದಿದ್ದ ಜನರಿಗೆ ನೆರವಿನ ಭರವಸೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇವತ್ತು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತೇನೆ. ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸು ಬರುತ್ತೇನೆ ಎಂದರು.
ಖಾತೆಗಳ ಹಂಚಿಕೆಯೂ ಹೈಕಮಾಂಡ್ ಅಂಗಳಕ್ಕೆ ಸಿಎಂ ಹೇಳಿಕೆ ನೋಡಿದರೆ ಇಂದು ಕೂಡ ಖಾತೆ ಹಂಚಿಕೆ ಆಗೋದು ಅನುಮಾನವಾಗಿದೆ. ಖಾತೆ ಹಂಚಿಕೆ ಬಗ್ಗೆಯೂ ರಾಷ್ಟ್ರೀಯ ನಾಯಕರ ಜೊತೆ ಚರ್ಚೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಅನರ್ಹ ಶಾಸಕರು ದೆಹಲಿಗೆ ಪ್ರಯಾಣ ಬೆನ್ನೆಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಸಚಿವರಿಂದ ವರದಿ:
ನೆರೆ ಸಂತ್ರಸ್ತರಿಗೆ ತಕ್ಷಣ 10 ಸಾವಿರ ರೂ. ಪರಿಹಾರ ವಿತರಣೆಯನ್ನು ಇಂದು ಸಂಜೆಯೊಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನೆರೆ ಪರಿಹಾರ ಕಾಮಗಾರಿಗಳ ಬಗ್ಗೆ ನಮ್ಮ ಎಲ್ಲ ಸಚಿವರು ಪರಿಶೀಲನೆ ನಡೆಸಿದ್ದಾರೆ. ನಾಳೆ ಅವರೆಲ್ಲರಿಂದ ವರದಿ ಪಡೆದು ಮನೆ ನಿರ್ಮಾಣ ಸೇರಿದಂತೆ ಉಳಿದೆಲ್ಲ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.