ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ ಒಂದು ತಾಸಿನಲ್ಲಿ ಅವರ ಮನೆಯನ್ನು ಶೋಧನೆ ನಡೆಸಲಾಗಿತ್ತು. ಅರಣ್ಯಾಧಿಕಾರಿಗಳ ಈ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅರಣ್ಯ ಇಲಾಖೆಯ ನೋಟಿಸ್ ಹಾಗೂ ಶೋಧನಾ ವಾರೆಂಟ್‌ಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಸಾಮಾಜಿಕ ಜಾಲತಾಣಗಳ ದೃಶ್ಯಗಳನ್ನು ಆಧರಿಸಿ ನೋಟಿಸ್ ಜಾರಿ ಮತ್ತು ಶೋಧನೆ ನಡೆಸಲು ಮುಂದಾಗಿದ್ದ ಅರಣ್ಯ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ನೋಟಿಸ್ ಮತ್ತು ಶೋಧನಾ ವಾರೆಂಟ್‌ಗೆ ಮಧ್ಯಂತರ ತಡೆ ನೀಡಿದೆ.
ಅಲ್ಲದೇ, ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದ ಬಳಿಕ ಅವರು ಉತ್ತರಕ್ಕಾಗಿ ನಿರೀಕ್ಷೆ ಮಾಡಬೇಕು. ಇಲ್ಲವೇ ಅವರು ಹೇಳಿಕೆ ನೀಡುವವರೆಗೂ ಸುಮ್ಮನೆ ಇರಬೇಕು. ನೋಟಿಸ್ ನೀಡಿದ ಒಂದೇ ತಾಸಿನಲ್ಲಿ ಶೋಧನೆ ನಡೆಸಿರುವ ಉದ್ದೇಶವೇನು? ಪ್ರಚಾರಕ್ಕಾಗಿ ಈ ರೀತಿ ನಡೆದುಕೊಳ್ಳಲಾಗಿದೆಯೇ? ಪ್ರಚಾರಕ್ಕಾಗಿ ಬೇರೆ ಯಾವುದಾದರೂ ಕೆಲಸ ಮಾಡಿ, ಅದರ ಬದಲಿಗೆ ಈ ರೀತಿಯಲ್ಲಿ ದಾಳಿ ನಡೆಸಿ ಪ್ರಚಾರ ಪಡೆದುಕೊಳ್ಳುವುದು ಎಷ್ಟು ಸರಿ ಎಂದು ಪೀಠ ಪ್ರಶ್ನೆ ಮಾಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಕ್ಟೋಬರ್ 25ರಂದು ತಮ್ಮಲ್ಲಿ ಯಾವುದೇ ಹುಲಿ ಉಗುರು ಇದ್ದಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆದಾದ ಒಂದು ಗಂಟೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವಲ್ಲಿ 14 ಅಧಿಕಾರಿಗಳು ಮನೆಗೆ ಭೇಟಿ ನೀಡಿ ಶೋಧನೆ ನಡೆಸಿದ್ದಾರೆ. ಅಲ್ಲದೇ, ಸುಮಾರು 40 ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಶೋಧನೆ ನಡೆಸುವುದಕ್ಕೆ ಮುಂದಾಗಿದ್ದಾರೆ ಎಂದರು.
ಇದರಿಂದ ಗರಂ ಆದ ನ್ಯಾಯಪೀಠ, ನೋಟಿಸ್ ನೀಡಿದ ಬಳಿಕ ಉತ್ತರ ನೀಡುವವರೆಗೂ ಸುಮ್ಮನಿರಬೇಕು ಎಂದು ಹೇಳಿತು. ಈ ವೇಳೆ ಸರ್ಕಾರದ ಪರ ವಕೀಲರು, ಕೆಲ ಮಾಹಿತಿಗಳ ಪ್ರಕಾರ ಹುಲಿ ಉಗುರು ನಾಶ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೇ ಕಾರಣಕ್ಕೆ ದಾಳಿ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.