ಬೆಂಗಳೂರು: ಅನರ್ಹ ಶಾಸಕರು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ಅವರೊಂದಿಗೆ ಇಂದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಯಾರು ಒಪ್ಪುತ್ತಾರೋ ಅವರಿಗೆ ಟಿಕೆಟ್: ಬಿ.ಎಸ್.ಯಡಿಯೂರಪ್ಪ ಘೋಷಣೆ !
ಅನರ್ಹ ಶಾಸಕರು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ಅವರೊಂದಿಗೆ ಇಂದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ಉಸ್ತುವಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರ ಜೊತೆ ಮಾತುಕತೆ ನಡೆಸಿ ಅವರಲ್ಲಿ ಯಾರು ಯಾರು ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಅವರಲ್ಲಿ ಕೆಲವರು ನಾಳೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಸುದೀರ್ಘ ಸಭೆ ನಡೆಸಿದ್ದೇವೆ ಎಂದರು. ಉಪ ಚುನಾವಣಾ ಉಸ್ತುವಾರಿಗಳ ಜೊತೆ ಸಭೆ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಕುರಿತು ಚರ್ಚಿಸಿದ್ದೇವೆ. ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲಬೇಕು ಆ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದೇವೆ ಎಂದರು. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಅಸಮಾಧಾನ ಇಲ್ಲ. ಲಕ್ಷ್ಮಣ ಸವದಿಯವರೂ ನಮ್ಮ ಜತೆ ಇದ್ದರು. ಅವರು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಲು ಒಪ್ಪಿದ್ದಾರೆ ಎಂದರು.
ನಂತರ ಮಾತನಾಡಿದ ಸಚಿವ ಸಿ.ಟಿ.ರವಿ, 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಅದಕ್ಕೆ ಬೇಕಾದ ತಂತ್ರಗಾರಿಕೆ ಮಾಡಿದ್ದೇವೆ. ಸರ್ಕಾರದ ಉಳಿವಿಗಾಗಿ ಗೆಲುವು ಅನಿವಾರ್ಯ. ಯಾರು ಸರ್ಕಾರದ ಉಳಿವು ಬಯಸುತ್ತಾರೋ ಅವರೆಲ್ಲಾ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಾರೆ. ಯಾರೂ ಸರ್ಕಾರ ಬೇಡ ಎನ್ನುವವರು ವಿರೋಧಿಸಲಿದ್ದಾರೆ ಅಂತಹವರು ಬಿಜೆಪಿಯವರೇ ಅಲ್ಲ ಎಂದು ರೆಬಲ್ ಗಳಿಗೆ ಟಾಂಗ್ ನೀಡಿದರು.