ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಕಾಂಗ್ರೆಸ್ ಪಕ್ಷಕ್ಕೆ ಆಕಾಂಕ್ಷಿಗಳ ಒತ್ತಡ ತೀವ್ರ ತೊಡಕಾಗಿ ಕಾಡುತ್ತಿದೆ. ದಿನದಿಂದ ದಿನಕ್ಕೆ ಕೈ ಪಾಳಯದಲ್ಲಿ ಟಿಕೆಟ್ಗಾಗಿ ಪೈಪೋಟಿ, ಒತ್ತಡ, ಪ್ರಭಾವ ಬೀರುವ ಪ್ರಯತ್ನ, ರಾಜ್ಯ ನಾಯಕರ ಮನೆಗೆ ಎಡತಾಕುವುದು, ಶಕ್ತಿ ಪ್ರದರ್ಶನ, ರಾಷ್ಟ್ರೀಯ ಹಾಗೂ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಯತ್ನಗಳು ಹೆಚ್ಚಾಗಿವೆ.
ಒಂದೆಡೆ ಆಸಕ್ತ ಆಕಾಂಕ್ಷಿಗಳಿಂದ ಅರ್ಜಿ ಪಡೆದು ಹಣ ಕಟ್ಟಿಸಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಇದೀಗ ಅದೇ ದೊಡ್ಡ ತೊಡಕಾಗಿದೆ. ದಿನದಿಂದ ದಿನಕ್ಕೆ ರಾಜ್ಯದೆಲ್ಲೆಡೆಯಿಂದ ಆಕಾಂಕ್ಷಿಗಳಿಂದ ಎದುರಾಗುತ್ತಿರುವ ಒತ್ತಡ ಸಹಿಸುವುದು ಕಷ್ಟವಾಗುತ್ತಿದೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 1500 ಮಂದಿ ಆಕಾಂಕ್ಷಿಗಳು ಸ್ಪರ್ಧೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ 5 ಸಾವಿರ ನೀಡಿದ್ದಲ್ಲದೇ, ಎಸ್ಸಿಎಸ್ಟಿ ಸಮುದಾಯದವರು ತಲಾ 1 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರು 2 ಲಕ್ಷ ರೂ. ಪಕ್ಷಕ್ಕೆ ಪಾವತಿ ಮಾಡಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಅರಿಯಲು ಕಾಂಗ್ರೆಸ್ ರಾಜ್ಯ ನಾಯಕರು ಮಾಡಿದ ಪ್ರಯತ್ನ ಇದೀಗ ಅವರಿಗೇ ಮುಳುವಾಗಿದೆ.
ಸಿದ್ದರಾಮಯ್ಯ ನಿವಾಸದಲ್ಲಿ ಇತ್ತೀಚೆಗೆ ಒಂದು ಸಂಧಾನ ಸಭೆ ನಡೆದಿರುವುದು ಇದಕ್ಕೆ ಸೂಕ್ತ ಉದಾಹರಣೆ. ಬೆಳಗಾವಿ ಜಿಲ್ಲೆಯ ರಾಮದುರ್ಗಾ ಕ್ಷೇತ್ರದ ಆಕಾಂಕ್ಷಿಗಳ ನಡುವೆ ಸಂಧಾನ ಸಭೆ ಮಾಡಿರುವ ಅವರು, ಟಿಕೆಟ್ಗಾಗಿ ಅಶೋಕ್ ಪಟ್ಟಣ್ ಹಾಗೂ ಚಿಕ್ಕರೇವಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಬ್ಬರನ್ನೂ ಕರೆಸಿ ಮಾತನಾಡಿದ್ದಾರೆ. ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಿಎಂ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದ ಚಿಕ್ಕರೇವಣ್ಣರ ಮನವೊಲಿಸುವಲ್ಲಿ ಸಫಲವಾಗಿದ್ದಾರೆ. ಈಗ ಅಶೋಕ್ ಪಟ್ಟಣ್ಗೆ ಟಿಕೆಟ್ ಕೊಡೋಣ. ಸರ್ಕಾರ ಬಂದಾಗ ಸ್ಥಾನಮಾನ ನೀಡೋಣ ಎಂದು ಚಿಕ್ಕರೇವಣ್ಣಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಕೊನೆಗೂ ಒಪ್ಪಿಗೆ ನೀಡಿದ ಚಿಕ್ಕರೇವಣ್ಣ ಅಲ್ಲಿಂದ ತೆರಳಿದ್ದಾರೆ.
ನಂತರ ಮಾಧ್ಯಮಗಳಿಗೆ ಮಾತನಾಡಿದ ಸಂದರ್ಭ ರಾಮದುರ್ಗ ಟಿಕೆಟ್ ಸಂಧಾನ ವಿಚಾರ ಪ್ರಸ್ತಾಪಿಸಿ, ಚಿಕ್ಕ ರೇವಣ್ಣ ಕೆಲಸ ಮಾಡಿಕೊಂಡು ಬರ್ತಾ ಇದ್ರು. ದುಡ್ಡು ಖರ್ಚು ಮಾಡಿ ಸಂಘಟನೆ ಮಾಡ್ತಾ ಇದ್ರು. ಈ ಬಾರಿ ಟಿಕೆಟ್ ಬೇಕು ಅಂತ ಕೆಲಸ ಮಾಡ್ತಾ ಇದ್ರು. ನಾನು ರೇವಣ್ಣ ಅವರನ್ನು ಕರೆದು ಮಾತನಾಡಿದೆ. ಈ ಬಾರಿ ಅಶೋಕ್ ಪಟ್ಟಣ್ಗೆ ಟಿಕೆಟ್ ಕೊಡೋಣ. ಗೆಲ್ಲಲು ಕೆಲಸ ಮಾಡೋಣ ಅಂತ ಹೇಳಿದ್ದೇನೆ. ಮುಂದೆ ಅವಕಾಶದ ಬಗ್ಗೆ ಹೇಳಿದ್ದೇನೆ. ಇದಕ್ಕೆ ಚಿಕ್ಕ ರೇವಣ್ಣ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಸಂಧಾನ ಅನಿವಾರ್ಯ-ಡಿಕೆಶಿ:ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ಗಾಗಿ ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿ ನಡೆಯುತ್ತಿದ್ದು, ನಾನು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಧ್ಯವಾದಷ್ಟು ಸಂಧಾನ ಸಭೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಮ್ಮಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಟಿಕೆಟ್ ಯಾರಿಗೆ ಕೊಡಬೇಕು ಎಂದು ಪಾರ್ಟಿ ತೀರ್ಮಾನ ಮಾಡುತ್ತದೆ.