ಬೆಂಗಳೂರು: ಹಾಡಹಗಲೇ ಪಿ.ಜಿ.ಗಳಿಗೆ ನುಗ್ಗಿ ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 16 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 50ಕ್ಕೂ ಹೆಚ್ಚು ಲ್ಯಾಪ್ಟಾಪ್ ಹಾಗೂ 7 ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು ಹಾಗೂ ತಮಿಳುನಾಡಿನ ಸೆಲ್ವರಾಜ್ ಬಂಧಿತ ಆರೋಪಿಗಳು. ಈ ಕಳ್ಳತನದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಿ.ಜಿ.ಗಳಲ್ಲಿ ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳು ಕಳ್ಳತನ ಆಗುತ್ತಿದ್ದ ದೂರುಗಳು ಹೆಚ್ಚು ದಾಖಲಾದ ಹಿನ್ನೆಲೆಯಲ್ಲಿ ಖದೀಮರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಾಗ ಕಳೆದ ತಿಂಗಳು 29ರಂದು ಮತ್ತಿಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು ಎಂಬ ಇಬ್ಬರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದ ಏಳು ಮೊಬೈಲ್ಗಳು ಪತ್ತೆಯಾಗಿತ್ತು. ಈ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆಂಧ್ರದಿಂದ ಬೆಂಗಳೂರಿಗೆ ಬಂದು ಲ್ಯಾಪ್ಟಾಪ್ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಇಬ್ಬರು ನೀಡಿದ ಮಾಹಿತಿ ಮೇರೆಗೆ ಚಿತ್ತೂರಿನಲ್ಲಿ ಆರೋಪಿಗಳಿಂದ ಕದ್ದ ಲ್ಯಾಪ್ಟಾಪ್ಗಳನ್ನು ಸ್ವೀಕರಿಸುತ್ತಿದ್ದ ಸೆಲ್ವರಾಜ್ ಎನ್ನುವವನನ್ನು ಬಂಧಿಸಲಾಗಿದೆ.