ಬೆಂಗಳೂರು:ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಿವಿಧ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮೌನೇಶ್ ಕುಮಾರ್, ಭಗತ್ ಹಾಗೂ ರಾಘವೇಂದ್ರ ಬಂಧಿತ ಆರೋಪಿಗಳು.
ಮೌನೇಶ್ ಕುಮಾರ್, ಹೆಬ್ಬಾಳ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ಎಂಎಸ್ಎಲ್ ಟೆಕ್ನೋ ಸೊಲ್ಯೂಶನ್ ಎಂಬ ಕಚೇರಿ ನಡೆಸುತ್ತಿದ್ದ. ಇದೇ ಕಚೇರಿ ಮೇಲೆ ನಿನ್ನೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮೌನೇಶ್ ಕುಮಾರ್ ಹಾಗೂ ಭಗತ್ ಮತ್ತು ರಾಘವೇಂದ್ರನನ್ನು ಬಂಧಿಸಿದ್ದಾರೆ.
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ರೀತಿಯ ನಕಲಿ ಆಧಾರ್ ಮತ್ತು ವೋಟರ್ ಐಡಿ ಕ್ರಿಯೇಟ್ ಮಾಡೋ ಜಾಲ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಯಾವೂದೇ ಕ್ಷೇತ್ರದ ವೋಟರ್ ಐಡಿ ಅಥವಾ ಯಾವುದೇ ವಿಳಾಸ, ಯಾವುದೇ ಫೋಟೋಗೆ ಐಡಿ, ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪ ಮೌನೇಶ್ ವಿರುದ್ಧ ಕೇಳಿ ಬಂದಿತ್ತು. ಸದ್ಯ ಹೆಬ್ಬಾಳ ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕಂಪ್ಯೂಟರ್ಗಳು ಕೆಲ ಆಧಾರ್ ಮತ್ತು ವೋಟರ್ ಕಾರ್ಡ್ ತಯಾರು ಮಾಡಲು ಬಳಸುತ್ತಿದ್ದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ.
ಇತ್ತೀಚಿನ ಸಿಸಿಬಿ ಕಾರ್ಯಾಚರಣೆ- ಖತರ್ನಾಕ್ ಗ್ಯಾಂಗ್ ಅರೆಸ್ಟ್:ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುವ ಮೂಲಕ ಸರ್ಕಾರ ಹಾಗೂ ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ಅನ್ನು ಸಿಸಿಬಿ ಇತ್ತೀಚೆಗೆ ಬಂಧಿಸಿದ್ದರು. ಡೆನಿಸ್, ಬಿಪಿನ್ ಸೇರಿ ಐವರು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು. ಬಂಧಿತ ಆರೋಪಿಗಳು ಎಸ್ಐಪಿ ಟ್ರಂಕ್ ಲೈನ್ (SIP trunk line) ಡಿವೈಸ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಕೋರಮಂಗಲದ ಬಿಜ್ ಹಬ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ನ 1,500 ಸಿಪ್ ಪೋರ್ಟಲ್ ಸಂಪರ್ಕ ಪಡೆದು 40 ದಿನಗಳಲ್ಲಿ ಒಟ್ಟು 68 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಯನ್ನು ಸ್ಥಳೀಯ ಕರೆಯಾಗಿ ಮಾರ್ಪಾಟು ಮಾಡಿದ್ದರು. ಮೈಕೋ ಲೇಔಟ್ ಆರ್ಚರ್ ಟೆಕ್ನಾಲಜಿಯಿಂದ 900 ಸಿಪ್ ಪೋರ್ಟಲ್ ಸಂಪರ್ಕ ಪಡೆದು, 60 ದಿನಗಳಲ್ಲಿ 24 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡಿದ್ದರು. ಟೈಮ್ ಇನ್ಫೋ ಟೆಕ್ನಾಲಜಿ ಎನ್ನುವ ಕಂಪನಿ ತೆರೆದು ಈ ವಂಚನೆ ಮಾಡಿದ್ದರು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಮೃತನ ಪತ್ನಿ ನೀಡಿದ ದೂರಿನಲ್ಲೇನಿದೆ?