ಬೆಂಗಳೂರು :ಜೈಲಿಂದ ಹೊರ ಬಂದರೂ ಕಸುಬು ಬಿಡದೇ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸಿಕೆ ಅಚ್ಚಕಟ್ಟು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಅಲಿಯಾಸ್ ಜಂಗ್ಲಿ ಎಂಬಾತ ಬಂಧಿತ. ಈ ಮುಂಚೆ ಕಳ್ಳತನ ಕೇಸ್ನಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿದ್ದ ಜಂಗ್ಲಿ, ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಹಳೇ ಕಸುಬು ಮುಂದುವರೆಸಿದ್ದ. ಕಳ್ಳತನ ಮಾಡಿ ಆಂಧ್ರಕ್ಕೆ ಪರಾರಿಯಾಗಿ ಚಿನ್ನಾಭರಣ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಮಾರಾಟ ಮಾಡಿದ್ದರಿಂದ ಬಂದ ಹಣದಿಂದ ಪತ್ನಿಯ ಜೊತೆ ವಿಲಾಸಿ ಜೀವನ ನಡೆಸುತ್ತಿದ್ದ. ಬಂಧಿತ ಆರೋಪಿಯಿಂದ ಎಂಟು ಲಕ್ಷ ಮೌಲ್ಯದ 183 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಪ್ರಕರಣದ ಮಾಹಿತಿ :ಪಾರ್ವತಿ ಎಂಬುವರು ಈ ಪ್ರಕರಣದ ಕುರಿತು ಫೆಬ್ರವರಿ 26ರಂದು ದೂರು ನೀಡಿದ್ದರು. ಆ ದಿನ ಬೆಳಗ್ಗೆ ಸುಮಾರು 11:15ಕ್ಕೆ ಪಾರ್ವತಿ ಕೆಲಸಕ್ಕಾಗಿ ಹೋದಾಗ ಅವರ ತಾಯಿ ಸರಸ್ವತಮ್ಮ ಮನೆಯಲ್ಲೇ ಇದ್ದರು. ಸಂಜೆ ಸುಮಾರು 4 ಗಂಟೆಗೆ ಪಾರ್ವತಿ ವಾಪಸ್ ಮನೆಗೆ ಬಂದಾಗ ಮನೆಯ ಡೋರ್ ಓಪನ್ ಇತ್ತು. ಒಳಗೆ ಹೋಗಿ ನೋಡಿದಾಗ ಮನೆಯ ಬೆಡ್ ರೂಂ ಬೀರುವಿನಲ್ಲಿದ್ದ ಬಟ್ಟೆಗಳು ಕೆಳಗೆ ಬಿದ್ದಿದ್ದವು.
ನಂತರ ಪರಿಶೀಲಿಸಿ ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಸುಮಾರು 100 ರಿಂದ 120 ಗ್ರಾಂ ತೂಕದ ಚಿನ್ನಾಭರಣಗಳು ಕಳ್ಳತನವಾಗಿವೆ ಎಂದು ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ಐಪಿಸಿ 380ರ ಅಡಿ ಪ್ರಕರಣ ದಾಖಲಾಗಿ ತನಿಖೆ ನಡೆಸಿದ್ದವು ಎಂದು ದಕ್ಷಿಣ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಜುಲೈ 7ರಂದು ಪ್ರಕರಣದ ಆರೋಪಿ ತೆಲಂಗಾಣ ರಾಜ್ಯದ ಪ್ರಕಾಶ್ ಅಲಿಯಾಸ್ ವಿಜಯ್ ಕುಮಾರ್ ಅಲಿಯಾಸ್ ಬಸವರಾಜು (33) ನೀಡಿದ್ದ ಮಾಹಿತಿಯ ಮೇರೆಗೆ ಒಟ್ಟು ಸುಮಾರು 8,25,000 ರೂ. ಬೆಲೆ ಬಾಳುವ 173.99 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ 3 ಮನೆಗಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ಹೇಳಿದ್ದಾರೆ.