ಬೆಂಗಳೂರು: ನಾಳೆ ಕರ್ನಾಟಕ ಬಂದ್ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು, ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಬಂದ್ ವಾಪಸ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಂಧಾನ ಸಕ್ಸಸ್ ಆಗಿದೆ. ಇನ್ನು ನನ್ನ ಮನವಿ ಒಪ್ಪಿ ಸಂಧಾನ ವಾಪಸ್ ಪಡೆದಿದ್ದಾರೆ. ಬಂದ್ ವಾಪಸ್ ಪಡೆದ ಹೋರಾಟಗಾರರಿಗೆ ಧನ್ಯವಾದಗಳು ಎಂದು ಸಿಎಂ ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಹೇಳಿದ್ದೇನು?
ಸಭೆ ಬಳಿಕ ಮಾತನಾಡಿದ ಕನ್ನಡ ಪರ ಸಂಘಟನೆಗಳ ನೇತಾರ ವಾಟಾಳ್ ನಾಗರಾಜ್, ನಾಳೆ ಕರ್ನಾಟಕ ಬಂದ್ ಹಾಗೂ ಟೌನ್ ಹಾಲ್ ನಿಂದ ಮೆರವಣಿಗೆ ಇಟ್ಟುಕೊಳ್ಳಲಾಗಿತ್ತು. ಸಿಎಂ ಎರಡು ಬಾರಿ ನಮಗೆ ಮನವಿ ಮಾಡಿ ಬಂದ್ ವಾಪಸ್ ಪಡೆಯುವಂತೆ ಮನವಿ ಮಾಡಿ, ಮಾತುಕತೆಗೆ ಆಹ್ವಾನಿಸಿದ್ದರು. ಬಂದ್ ಹಿಂಪಡೆಯುವಂತೆ ಮಾತುಕತೆ ನಡೆಸಿ ಕರೆ ನೀಡಿದ್ದರು. ಅಷ್ಟೇ ಅಲ್ಲ ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಎಂಇಎಸ್ ನಿಷೇಧ ಮಾಡೋದರ ಬಗ್ಗೆ ಸರ್ಕಾರ ಕೆಲಸ ಮಾಡುತ್ತೆ ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಂದ್ ಕರೆ ವಾಪಸ್ ಪಡೆಯುತ್ತಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು.
ನಾಳೆ ಬಂದ್ ಇರೋದಿಲ್ಲ.. ಬದಲಿಗೆ ಬೃಹತ್ ಮೆರವಣಿಗೆ; ಸಾರಾ ಗೋವಿಂದು
ಹೊಸ ವರ್ಷದ ಹಿಂದಿನ ದಿನ ಬಂದ್ ಸರಿ ಅಲ್ಲ. ಹೀಗಾಗಿ ಬಂದ್ ವಾಪಸ್ ಪಡೆಯಿರಿ ಎಂದು ಸಿಎಂ ಮನವಿ ಮಾಡಿದರು. ಅಷ್ಟೇ ಅಲ್ಲ ಎಂಇಎಸ್ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದರು ಎಂದು ವಾಟಾಳ್ ನಾಗರಾಜ್ ಹೇಳಿದರು. ಇದೇ ವೇಳೆ ಮಾತನಾಡಿದ ಸಾ.ರಾ ಗೋವಿಂದು ನಾಳೆ ಬಂದ್ ಇಲ್ಲ, ಮುಂದೂಡಿದ್ದೇವೆ, ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದರು. ಆದರೆ ನಾಳೆ ಟೌನ್ ಹಾಲ್ ನಿಂದ ಮೆಜೆಸ್ಟಿಕ್ ಹಾಗೂ ಫ್ರೀಡಂ ಪಾರ್ಕ್ ವರೆಗೆ ಕನ್ನಡಪರ ಸಂಘಟನೆಗಳಿಂದ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಘೋಷಿಸಿದರು.