ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಪ್ರತಿಯೊಂದು ವರ್ಗಕ್ಕೂ ಹೊಡೆತ ಬಿದ್ದಿದೆ. ಇದಕ್ಕೆ ಖಾಸಗಿ ಬಸ್ಗಳು ಸಹ ಹೊರತಲ್ಲ, ಈ ನಡುವೆ ಸಾರಿಗೆ ಇಲಾಖೆ ಖಾಸಗಿ ಬಸ್ಗಳ ಟಿಕೆಟ್ ದರ ಶೇ. 15ರಷ್ಟು ಹೆಚ್ಚಿಗೆ ಮಾಡಲು ಅನುಮತಿ ನೀಡಿದೆ.
ಆದರೆ ಈಗೀನ ಹೆಚ್ಚುತ್ತಿರುವ ಡಿಸೇಲ್ ದರಕ್ಕೆ ಹೋಲಿಸಿದರೆ ಟಿಕೆಟ್ ದರ ಹೆಚ್ಚು ಮಾಡಿದರೆ ಪ್ರಯೋಜನವಿಲ್ಲ ಅಂತ ಬಸ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಸೇಲ್ ದರಕ್ಕೆ ಹೋಲಿಸಿದರೆ ಖಾಸಗಿ ಬಸ್ ದರ ಹೆಚ್ಚಾದರೆ ಪ್ರಯೋಜನವಿಲ್ಲ: ಮಾಲೀಕರ ಅಳಲು ರಾಜ್ಯದಾದ್ಯಂತ ಸುಮಾರು 8,500 ಖಾಸಗಿ ಬಸ್ (ಸ್ಟೇಜ್ ಕ್ಯಾರೆಜ್) ಸಂಚರಿಸುತ್ತಿವೆ. ಪ್ರತಿ ತಿಂಗಳು ಡೀಸೆಲ್ ಹಾಗೂ ಬಿಡಿ ಭಾಗಗಳ ಮೇಲಿನ ತೆರಿಗೆ, ಸೆಸ್ ಸುಮಾರು 120ಕೋಟಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ರಸ್ತೆ ಸಾರಿಗೆ ಪ್ರತಿ ತಿಂಗಳು ಸುಮಾರು 15 ಕೋಟಿ ಸಂದಾಯವಾಗುತ್ತಿದ್ದು, ಬಸ್ ವಿಮೆ ಪ್ರತಿ ತಿಂಗಳು 6 ಕೋಟಿ ಕಟ್ಟಲಾಗುತ್ತಿದೆ. ಈಗಾಗಲೇ 4 ತಿಂಗಳಿನಿಂದ ಯಾವುದೇ ಖಾಸಗಿ ಬಸ್ಗಳು ಸಂಚರಿಸುತ್ತಿಲ್ಲ.
ಆದ್ಧರಿಂದ ರಾಜ್ಯ ಸರ್ಕಾರ ಖಾಸಗಿ ಬಸ್ಗಳ ನಿರ್ವಹಣಾ ವೆಚ್ಚ ಪ್ರತಿ ಬಸ್ಸಿಗೆ ಕನಿಷ್ಠ ಒಂದು ಲಕ್ಷದಂತೆ ಅನುದಾನ ನೀಡಿದ್ದಲ್ಲಿ, ಒಟ್ಟು ರಾಜ್ಯದಲ್ಲಿ ಸಂಚರಿಸುತ್ತಿರುವ ಸುಮಾರು 8,500 ಬಸ್ಗಳಿಗೆ 85 ಕೋಟಿ ಅನುದಾನ ನೀಡಬೇಕಾಗುತ್ತದೆ. ಒಟ್ಟು 165 ಕೋಟಿ ರಾಜ್ಯ ಸರ್ಕಾರ ಖಾಸಗಿ ಬಸ್ಗಳಿಗೆ ಮಂಜೂರು ಮಾಡಬೇಕೆಂದು ಎಂದು ಕರ್ನಾಟಕ ಬಸ್ ಮಾಲೀಕರ ಫೆಡರೇಷನ್ನ ಉಪಾಧ್ಯಕ್ಷ ಕೆ.ಕೆ ಬಾಲಕೃಷ್ಣ ಆಗ್ರಹಿಸಿದ್ದಾರೆ.
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಕೊರೊನಾ ಹರಡದಂತೆ ತಡೆಗಟ್ಟಲು 50 ಸೀಟಿನ ಬಸ್ನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಆದ್ಧರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ ಮಾಲೀಕರು ನಷ್ಟ ಅನುಭವಿಸುವ ಸಂಭವವಿದೆ. ಬಸ್ ರಸ್ತೆಗಿಳಿದರೆ ಬಸ್ ಸಿಬ್ಬಂದಿಗೂ ಕೂಡ ಸೋಂಕು ಹರಡುವ ಸಂಭವವಿದೆ.
ಹೀಗಾಗಿ ಕೊರೊನಾ ಸೋಂಕಿತ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಜೊತೆಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಮನವಿ ಮಾಡಿದ್ದಾರೆ, ಇಷ್ಟಲ್ಲದೆ ಸ್ಯಾನಿಟೈಸ್ ವೆಚ್ಚವನ್ನು ಸರ್ಕಾರವೇ ನೀಡಬೇಕು. ಕಚ್ಚಾತೈಲ ದರ ಕೇಂದ್ರ ಸರ್ಕಾರ ಇಳಿಕೆ ಮಾಡಿದರೆ ಸ್ವಲ್ಪ ನೆಮ್ಮದಿಯಾಗುತ್ತದೆ ಕೆ.ಕೆ ಬಾಲಕೃಷ್ಣ ತಿಳಿಸಿದ್ದಾರೆ.
ಕೊರೊನಾ ಅಟ್ಟಹಾಸದ ನಡುವೆ ಪ್ರಯಾಣಿಕರಿಲ್ಲದೆ ಖಾಸಗಿ ಬಸ್ ಮಾಲೀಕರು ಕಂಗಾಲಾಗಿದ್ದಾರೆ. ಇತ್ತ ಬಸ್ ನಿರ್ವಹಣೆಯ ವೆಚ್ಚವೂ ಕೈಸೇರದೆ ನಷ್ಟ ಅನುಭವಿಸುತ್ತಿದ್ದು, ದರ ಏರಿಕೆ ಮಾಡಿದರೂ ನಷ್ಟ ಸರಿದೂಗಿಸುವುದು ಕಷ್ಟಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.