ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ್ದರ ಹಿಂದೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 'ನಾನು ಸದುದ್ದೇಶದಿಂದ ಹೇಳಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಧೈರ್ಯ ತೋರಿಸಬೇಕೆಂದು ಹೇಳಿದ್ದೇನೆ. ಕೇಂದ್ರ ಸರ್ಕಾರದಿಂದ ಅನುದಾನ ಸರಿಯಾಗಿ ಬಂದಿಲ್ಲ. ಅನುದಾನ ಎಲ್ಲಾ ಕಡಿಮೆಯಾಗಿದೆ. ಆ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು ಬೇರೆ ಕಾರಣಕ್ಕೆ ಅಲ್ಲ' ಎಂದು ಸ್ಪಷ್ಟಪಡಿಸಿದರು.
ನಾಯಿಮರಿ ಹೇಳಿಕೆಗೆ ಪ್ರತಿಯಾಗಿ ಬೆಕ್ಕು, ಇಲಿಗೆ ಹೋಲಿಸಿದ ಶ್ರೀರಾಮುಲು ವಿರುದ್ಧ ಗರಂ ಆದ ಸಿದ್ದರಾಮಯ್ಯ, 'ಅವನ್ಯಾರ್ರೀ ಪೆದ್ದ. ಅವನ ಬಗ್ಗೆ ಮಾತನ್ನಾಡೋದಿಲ್ಲ' ಎಂದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಎಫ್ಐ ಸಂಘಟನೆ ವಿರುದ್ಧದ ಮೊಕದ್ದಮೆ ಹಿಂಪಡೆದಿದೆ ಎಂಬ ಕಟೀಲ್ ಹೇಳಿಕೆ ವಿಚಾರಕ್ಕೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. 'ಬಿಜೆಪಿ ಅಂದ್ರೇನೆ ಸುಳ್ಳಿನ ಕಾರ್ಖಾನೆ. ಸುಳ್ಳು ಹೇಳೋದೆ ಅವರ ವೃತ್ತಿ. ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರೂ ಸುಳ್ಳು ಹೇಳೋದೆ' ಎಂದರು.
ಯಾಕೆ ಹೇಳಿದ್ದರು?:ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿಮರಿ ಇದ್ದಂತೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ವಿಜಯನಗರ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಮೋದಿ ಎದುರು ನಡುಗಿದರು ಎಂದು ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯಕ್ಕೆ ಬಾಕಿ ಇರುವ ಬಾಕಿ ಹಣವನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು. 'ನಿಮಗೆ (ಬೊಮ್ಮಾಯಿ) ಧೈರ್ಯ ಮತ್ತು ಶಕ್ತಿ ಇದ್ದರೆ, ನರೇಂದ್ರ ಮೋದಿಯವರ ಮುಂದೆ ನಾಯಿಮರಿ ಏಕೆ?' ಎಂದು ಸಿದ್ದರಾಮಯ್ಯ ಕೇಳಿದ್ದರು.
ಪರ-ವಿರೋಧ ಹೇಳಿಕೆ:ಸಿದ್ದರಾಮಯ್ಯ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪ್ರತಿಕ್ರಿಯೆ ನೀಡಿದ್ದರು. 'ಸಿದ್ದರಾಮಯ್ಯ ಅವರ ಪದಗಳ ಆಯ್ಕೆ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ನಾಯಿ ನಿಷ್ಠೆಗೆ ಹೆಸರುವಾಸಿಯಾಗಿದೆ. ನಾನು ಜನರ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ' ಎಂದು ಸಿಎಂ ಟಾಂಗ್ ಕೊಟ್ಟಿದ್ದರು. ಬಳಿಕ ಬಿಜೆಪಿ ನಾಯಕರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಯನ್ನ ತಿರುಚಲಾಗಿದೆ. ಅವರು ಆ ಅರ್ಥದಲ್ಲಿ ಹೇಳಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡು, ಬಿಜೆಪಿ ಮೇಲೆ ಹರಿಹಾಯ್ದಿದ್ದರು. ಸಿಎಂ ಅವರನ್ನ ನಾಯಿಮರಿಗೆ ಹೋಲಿಸಿ ಮಾತನಾಡಿದ ಸಿದ್ದರಾಮಯ್ಯ ಹೇಳಿಕೆ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಚರ್ಚೆಗೆ ಒಳಗಾಗಿದೆ.
ಇದನ್ನೂ ಓದಿ: ನಾಯಿ ನಿಯತ್ತಿನ ಪ್ರಾಣಿ, ನಾನು ಜನರಿಗೆ ನಿಯತ್ತಿನಿಂದ ಕೆಲಸ ಮಾಡುತ್ತಿರುವೆ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು
ಕಾಂಗ್ರೆಸ್ ಮೇಲೆ ಸಿ.ಟಿ.ರವಿ ಕೆಂಡ: 'ನಾಯಿಯಂತೆ ಬಾಲ ಅಲ್ಲಾಡಿಸಿ ಕುಂಯಿ...ಕುಂಯಿ.. ಅಂತ ಬರೋದು ಕಾಂಗ್ರೆಸ್ ಕಲ್ಚರ್. ಕಾಂಗ್ರೆಸ್ಸಿಗರು ಯಾವ ಪದ ಬಳಸಿದ್ದಾರೋ ಅದು ಕಾಂಗ್ರೆಸ್ಸಿಗೆ ಅನ್ವಯವಾಗುತ್ತೆ' ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ವಾಗ್ದಾಳಿ ನಡೆಸಿದ್ದರು. 'ಕಾಂಗ್ರೆಸ್ಸಿನಲ್ಲಿ ಮಾತ್ರ ಮುಖ್ಯಮಂತ್ರಿಯನ್ನ ಆ ರೀತಿ ನಡೆಸಿ ಕೊಳ್ಳುವುದು. ಮುಖ್ಯಮಂತ್ರಿಗಳನ್ನ ಬಾಲ ಅಲುಗಾಡಿಸುವಂತೆ ನೋಡಿ ಕೊಳ್ಳುತ್ತಿದ್ದದ್ದು ಕಾಂಗ್ರೆಸ್ ಮಾತ್ರ. ವೀರೇಂದ್ರ ಪಾಟೀಲ್ ರಾಜ್ಯ ಕಂಡ ಅಪರೂಪದ, ಪ್ರಭಾವಿ ನಾಯಕ. ಅವರು ಆಸ್ಪತ್ರೆಯಲ್ಲಿದ್ದಾಗ ನೋಡಿಕೊಂಡು ಹೋಗಿ ರಾಜೀವ್ ಗಾಂಧಿ ಏರ್ಪೋರ್ಟ್ನಲ್ಲಿ ಪದಚ್ಯುತಿಗೊಳಿಸಿದ್ದರು. ಮುಖ್ಯಮಂತ್ರಿ ಆಡಳಿತ ಪಾಲುದಾರರು ಎಂದು ಪ್ರಧಾನಿ ಭಾವಿಸುತ್ತಾರೆ. ಕಾಂಗ್ರೆಸ್ ಕಲ್ಚರ್ ಬಿಜೆಪಿಯಲ್ಲಿದೆ ಎಂದು ಸಿದ್ದರಾಮಯ್ಯ ಭಾವಿಸಿರಬಹುದು, ಅದು ತಪ್ಪು ಕಲ್ಪನೆ' ಎಂದು ಸಿ.ಟಿ.ರವಿ ಹೇಳಿದ್ದಾರೆ.
ಇದನ್ನೂ ಓದಿ: 'ನಾಯಿ ನಿಯತ್ತಿನ ಪ್ರಾಣಿ, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ನಾಯಿಯಾಗಿದ್ದರೆ ಒಳ್ಳೆಯದು'