ಬೆಂಗಳೂರು: ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಹೀಗೆ ಹಲವು ರೀತಿಯ ಕಾಗದ ಪತ್ರಗಳನ್ನು ನಕಲಿ ಮಾಡಿರುವುದನ್ನು ನೀವೂ ಕೇಳಿರುತ್ತೀರಿ... ಆದರೆ, ಈ ಖತರ್ನಾಕ್ ಕಿಲಾಡಿಗಳು ಹೈಕೋರ್ಟ್ ಆದೇಶ ಪ್ರತಿ ಹಾಗೂ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ವಂಚನೆ ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಗಳಾದ ಎಂ.ಜಿ.ಗೋಕುಲ್ ಹಾಗೂ ವಿಶಾಲ್ ಸಿಂಗ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ..
ಮೂಲತಃ ಉತ್ತರ ಪ್ರದೇಶದ ಮೂಲದ ಆರೋಪಿಗಳು ಹಣದಾಸೆಗಾಗಿ ಕಳ್ಳತನ ದಾರಿ ಹಿಡಿದಿದ್ದರು. ಇದಕ್ಕಾಗಿ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿದ್ದರು. ಕುತೂಹಲಕಾರಿ ವಿಷಯವೇನೆಂದರೆ ಅಂದರೆ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ಫ್ಲೈಟ್ ಹತ್ತುವ ಮೂಲಕ ಒಂದು ರೀತಿಯಲ್ಲಿ ಹೈಫೈ ಕಳ್ಳರಾಗಿ ಕುಖ್ಯಾತಿ ಪಡೆದಿದ್ದರು.
ಬೆಂಗಳೂರಿನ ರಾಜಾಜಿನಗರ, ಚಂದ್ರಾ ಲೇಔಟ್, ಜ್ಞಾನಭಾರತಿ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬೈಕ್ ಮೂಲಕ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದರು. ಇಬ್ಬರ ಮೇಲೂ ನಗರದ ವಿವಿಧ ಠಾಣೆಗಳಲ್ಲಿ ಬರೋಬ್ಬರಿ 21 ಪ್ರಕರಣ ದಾಖಲಾಗಿತ್ತು. ಇಷ್ಟಾದರೂ ಈ ಚಾಲಾಕಿ ಚೋರರು ಪೊಲೀಸರ ಬಲೆಗೆ ಬಿದ್ದಿರಲೇ ಇಲ್ಲ. ಸದ್ಯ ಈ ಹೈಫೈ ಕಳ್ಳರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.