ಬೆಂಗಳೂರು :ದೀಪಾವಳಿ ಹಬ್ಬ ಇದ್ರೂ ಇನ್ನೂ ಸಂಬಳದ ಭಾಗ್ಯ ಕರುಣಿಸದ ಸಾರಿಗೆ ನಿಗಮಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಎಸ್ಆರ್ಟಿಸಿ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಳಕಿನ ಹಬ್ಬಕ್ಕೂ ಕತ್ತಲೆಯಲ್ಲಿರುವ ಸಾರಿಗೆ ನೌಕರರು ಎಂದು ಸರ್ಕಾರ ಹಾಗೂ ವಿಪಕ್ಷ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಆಫೀಸ್ ಸಿಬ್ಬಂದಿಗೆ ಒಂದನೇ ತಾರೀಖಿನಂದೆ ಸಂಬಳವಾಗ್ತಿತ್ತು. ನಾಲ್ಕರಂದು ಡಿಪೋ ಮೆಕ್ಯಾನಿಕ್ಸ್, ಏಳನೇ ತಾರೀಖಿನಂದು ಡ್ರೈವರ್, ಕಂಡಕ್ಟರ್ಗಳಿಗೆ ಸಂಬಳವಾಗ್ತಿತ್ತು. ಆದರೆ, ಈ ಬಾರಿ 14ನೇ ದಿನಾಂಕವಾದ್ರೂ ಸಂಬಳವಾಗಿಲ್ಲ.
ಸಂಬಳ ನೀಡದ ಸರ್ಕಾರ ವಿರುದ್ಧ ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ ಕೆಎಸ್ಆರ್ಟಿಸಿಯಲ್ಲಿ 38 ಸಾವಿರ ನೌಕರರಿದ್ದಾರೆ. KSRTC, BMTC, NEKRTC ಹಾಗೂ NEKRTC ಸೇರಿ 1 ಲಕ್ಷದ 20 ಸಾವಿರ ನೌಕರರಿದ್ದಾರೆ. ಕೋವಿಡ್ ಕಾರಣದಿಂದ ಸರಿಯಾದ ಸಮಯಕ್ಕೆ ಸಂಬಳವಾಗ್ತಿಲ್ಲ. ಈ ಬಾರಿ ಹಬ್ಬ ಇರೋದ್ರಿಂದ ಸರಿಯಾದ ಸಮಯಕ್ಕೆ ಸಂಬಳದ ನಿರೀಕ್ಷೆಯಲ್ಲಿದ್ದ ಸಾರಿಗೆ ಸಿಬ್ಬಂದಿಗೆ ನಿರಾಶೆಯಾಗಿದೆ.
ಇದು ಕೆಎಸ್ಆರ್ಟಿಸಿ ಕಥೆಯಾದ್ರೆ, ಇತ್ತ ಬಿಎಂಟಿಸಿಯಲ್ಲೂ ಇದೆ ಗೋಳಾಗಿದೆ. ಬಿಎಂಟಿಸಿಯಲ್ಲಿ 38 ಸಾವಿರ ನೌಕರರಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿ ತಿಂಗಳು ಏಳನೇ ತಾರೀಖಿನಂದು ಸಂಬಳ ನೀಡ್ತಿದ್ರು. ಆದರೆ, ಈ ಬಾರಿ ಈವರೆಗೆ ಸಂಬಳವಾಗಿಲ್ಲ.
ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನೋವು ತೋಡಿಕೊಳ್ತಿರೋ ಸಿಬ್ಬಂದಿ, ದೀಪಾವಳಿಯನ್ನೂ ಕತ್ತಲಲ್ಲಿ ಆಚರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್ ಬಳಿಕ ಸಂಬಳಕ್ಕೆ ಸರ್ಕಾರವನ್ನೇ ನೆಚ್ಚಿಕೊಂಡಿರುವ ಸಾರಿಗೆ ನಿಗಮಗಳಿಂದಾಗಿ, ಸರ್ಕಾರ ಕೊಟ್ರೆ ಮಾತ್ರ ಸಂಬಳ ಎಂಬ ಪರಿಸ್ಥಿತಿಗೆ ತಲುಪಿವೆ. ಹೀಗಾಗಿ, ಸಾರಿಗೆ ನೌಕರರಿಗೆ ಕೆಲಸ ಮಾಡಿದ್ರೂ ಸರಿಯಾದ ಸಮಯಕ್ಕೆ ವೇತನ ಕೈಸೇರುತ್ತಿಲ್ಲ.