ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದಿದ್ದ ಯುವತಿಯೊಬ್ಬಳು ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ಕೋರಮಂಗಲದ 8ನೇ ಬ್ಲಾಕ್ನಲ್ಲಿ ನಡೆದಿದೆ. ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಅರ್ಚನಾ ಧಿಮಾನ್ (28) ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್ ಪ್ರತಿಷ್ಠಿತ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ಆದೇಶ್ನನ್ನು ಭೇಟಿಯಾಗಲು ನಿನ್ನೆ ದುಬೈನಿಂದ ಬಂದಿದ್ದರು. ಕೇರಳ ಮೂಲದ ಆದೇಶ್ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ 12 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಅರ್ಚನಾ ಸಾವನ್ನಪ್ಪಿದ್ದಾರೆ.
ಕೆಲವು ವರ್ಷಗಳಿಂದ ಅರ್ಚನಾ ಹಾಗೂ ಆದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಶುಕ್ರವಾರ ಬೆಂಗಳೂರಿಗೆ ಗೆಳೆಯನ್ನ ಭೇಟಿಯಾಗಲು ಬಂದಾಗ ಘಟನೆ ನಡೆದಿದೆ. ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ಗಂಡನಿಂದ ಕೊಲೆ ಶಂಕೆ
ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಕಳೆದ ಫೆಬ್ರವರಿ 7 ರಂದು ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಪತ್ನಿಯನ್ನು ಗಂಡನೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿತ್ತು. ಕೋಲ್ಕತ್ತಾ ಮೂಲದ ಮೊನಿಷ್ ಕತೂಮ್ ಸಾವನ್ನಪ್ಪಿದ ಮಹಿಳೆ. ಅವರ ಪತಿ ಶೇಖ್ ಮಜಿದ್ ತಲೆಮರೆಸಿಕೊಂಡಿದ್ದ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.