ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ನೆರೆಹಾನಿ ಕುರಿತು ಗಂಭೀರ ಚರ್ಚೆ ನಡೆಯುವ ವೇಳೆ ಒಂದು ಚೊಂಬಿನ ಕಥೆ ಎನ್ನುವ ಹಾಸ್ಯ ಪ್ರಸಂಗ ನಡೆಯಿತು. ಬಿಜೆಪಿಯ ಕಥೆಗೆ ಜೆಡಿಎಸ್, ಕಥೆ ಮೂಲಕವೇ ತಿರುಗೇಟು ನೀಡಿತು.
ಪರಿಷತ್ನಲ್ಲಿ ನೆರೆ ಸಂತ್ರಸ್ತರ ಸಮಸ್ಯೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುವ ವೇಳೆ ಬಿಜೆಪಿ ಸದಸ್ಯ ಪ್ರಾಣೇಶ್ ಕಥೆಯೊಂದನ್ನು ಹೇಳಿ ಗಮನ ಸೆಳೆದರು. 5 ಬೆರಳುಗಳಲ್ಲಿ ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆದಿತ್ತು. ಬಲಶಾಲಿ ಎಂದು ಹೆಬ್ಬೆರಳು, ದಿಕ್ಕು ತೋರಿಸುವುದು ನಾನು ಎಂದು ತೋರುಬೆರಳು, ಮಧ್ಯದ ಬೆರಳು ನಾನು ಉದ್ದ ಇರುವುದಾಗಿ, ಉಂಗುರ ಬೆರಳು ನಾನು ವಜ್ರ ವೈಢೂರ್ಯ ತೊಡುತ್ತೇನೆ ಎಂದು, ಕಿರುಬೆರಳು ನಮಸ್ಕರಿಸುವಾಗ ನಾನು ಮೊದಲಿರುತ್ತೇನೆ. ಹೀಗಾಗಿ ನಾನು ದೊಡ್ಡವನು ಎಂದು ಪೈಪೋಟಿಗೆ ಬಿದ್ದಿದ್ದವು.
ಈ ವೇಳೆ, ಬ್ರಹ್ಮ ಬೆರಳುಗಳಿಗೆ ಪರೀಕ್ಷೆ ಇಟ್ಟ. ಹಾಲು ತುಂಬಿದ ಚೊಂಬು ಇಟ್ಟು ಅದನ್ನು ಎತ್ತುವಂತೆ ಎಲ್ಲಾ ಬೆರೆಳುಗಳಿಗೆ ಹೇಳಿದ ಕೊನೆಗೆ ಯಾವ ಬೆರಳುಗಳಿಂದಲೂ ಎತ್ತಲೂ ಸಾಧ್ಯವಾಗಲಿಲ್ಲ. ನಂತರ ಎಲ್ಲಾ ಬೆರಳು ಸೇರಿ ಚೊಂಬು ಎತ್ತಿ ಎಂದು ಹೇಳಿದ ಆಗ ಹೂವಿನಂತೆ ಚೊಂಬನ್ನು ಎತ್ತಲು ಸಾಧ್ಯವಾಯಿತು. ಚೊಂಬು ಹಿಡಿದ ನಂತರ ಯಾವ ಬೆರಳು ಹೆಚ್ಚು ಎಂದಾಗ ಎಲ್ಲ ಬೆರಳುಗಳು ಸಮವಾಗಿರುವುದು ಕಂಡು ಬಂತು. ಅದೇ ರೀತಿ ಪ್ರತಿಪಕ್ಷ ಆಡಳಿತ ಪಕ್ಷಕ್ಕೆ ಸಹಕಾರ ಕೊಡಬೇಕಾ ಎಂದು ಬೆರಳಿನ ಕಥೆ ಮೂಲಕ ಆಡಳಿತ ಪಕ್ಷದ ಸದಸ್ಯ ಪ್ರಾಣೇಶ್ ಮನವಿ ಮಾಡಿದರು.