ಕರ್ನಾಟಕ

karnataka

ETV Bharat / state

ಮತ್ತೆ ಶುರುವಾಯ್ತು ದೋಸ್ತಿಗಳ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು! - ಕುಮಾರಸ್ವಾಮಿ

ಕುಮಾರಸ್ವಾಮಿ ಬಾಯಿಂದ ಹೊರಬಿದ್ದ ಹೇಳಿಕೆಯಿಂದ ದೋಸ್ತಿ ಸರ್ಕಾರದ ಒಳಗಿನ ಮುಸುಗಿನ ಗುದ್ದಾಟ ಹೊರಬಿದ್ದಿದೆ.

ಸೀಟು ಹಂಚಿಕೆ ಬಿಕ್ಕಟ್ಟು

By

Published : Feb 20, 2019, 3:09 PM IST

ಬೆಂಗಳೂರು: 'ವಿ ಆರ್ ನಾಟ್ ಬೆಗ್ಗರ್ಸ್’ ಎಂಬ ಪದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಾಯಿಂದ ಹೊರಬೀಳುವ ಮೂಲಕ ಮತ್ತೊಮ್ಮೆ ಮೈತ್ರಿ ಸರ್ಕಾರದ ಒಳಗಿನ ಮುಸುಗಿನ ಗುದ್ದಾಟ ಹೊರಬಿದ್ದಿದೆ.

ಅಂತು ಇಂತು ಈ ಸರ್ಕಾರ ಲೋಕಸಭೆಯವರೆಗೆ ತೆರಳಬಹುದು ಎನ್ನುವ ಮಾತನ್ನಾಡುತ್ತಿದ್ದವರಿಗೆ ಸಿಎಂ ನಿನ್ನೆ ಆಡಿದ ಮಾತು ಅತ್ಯಂತ ಪುಷ್ಠಿದಾಯಕವಾಗಿ ಲಭಿಸಿದೆ. ನಿನ್ನೆ ಮಾಧ್ಯಮಗಳ ಜತೆ ಮಾತನಾಡಿದ ಸಂದರ್ಭ ಸಿಎಂ ಕುಮಾರಸ್ವಾಮಿ, ಈ ಏಳು, ಐದು, ಮೂರು.. ವಿ ಆರ್ ನಾಟ್ ಬೆಗ್ಗರ್ಸ್. ಇಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ. ಇಲ್ಲಿರುವ ಪ್ರಶ್ನೆ ರಾಷ್ಟ್ರದ ರಾಜಕಾರಣಕ್ಕೆ ಒಂದು ಸ್ಪಷ್ಟ ಸಂದೇಶ ಕೊಡಬೇಕು ಎನ್ನುವುದು. ಎಲ್ಲರಿಗೂ ಈ ಭಾವನೆ ಇದ್ದರೆ ಎಲ್ಲರೂ ಕುಳಿತು ಸಮಗ್ರವಾಗಿ ಚರ್ಚಿಸಬೇಕು ಎಂದಿದ್ದರು. ಈ ರೀತಿ ಎಲ್ಲರೂ ಕೂತು ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು ಎಂದಿರುವ ಸಿಎಂ, ಸೀಟು ಹೊಂದಾಣಿಕೆ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ನಾಯಕ ದೇವೇಗೌಡರು ತೀರ್ಮಾನಿಸುತ್ತಾರೆ ಎನ್ನುವ ಮಾತು ಆಡಿದ್ದಾರೆ.

ಕೈ ಕೋಪ:

ಈ ಮಾತುಗಳು ಕಾಂಗ್ರೆಸ್ ನಾಯಕರಿಗೆ ಬೇಸರ ತರಿಸಿದೆ. ಒಂದೆಡೆ ಕೈ ನಾಯಕರು ಸಿಎಂ ಮತಿಗೆ ವಿವಿಧ ರೀತಿಯಲ್ಲಿ ವ್ಯಾಖ್ಯಾನ ಕೊಟ್ಟು ಮಾತನಾಡಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಕಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಗೆ ಯಾರೂ ಬೆಗ್ಗರ್ಸ್ ಅಲ್ಲ, ನಾವೂ ಬೆಗ್ಗರ್ಸ್ ಅಲ್ಲ, ಅವರೂ ಅಲ್ಲ ಎಂದಿದ್ದಾರೆ. ಅಂದಹಾಗೆ ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ ಹಾಲಿ ಸಂಸದರು ಇರುವ ಕ್ಷೇತ್ರ ಬಿಟ್ಟುಕೊಡಬಾರದು ಎಂಬ ತೀರ್ಮಾನ ಕಾಂಗ್ರೆಸ್‍ನಲ್ಲಿ ಆಗಿದೆ ಎಂದಿದ್ದಾರೆ.

ಈ ನಡುವೆ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದಿದ್ದಾರೆ. ಇದೆಲ್ಲದರ ನಡುವೆ ಈ ಹಿಂದೆ ಮೋದಿ ಅಲೆ ಇದ್ದ ಸಂದರ್ಭದಲ್ಲೇ ಗೆದ್ದು ಬಂದಿರುವ 9 ಸಂಸದರು ಹಾಗೂ ಉಪ ಚುನಾವಣೆಯಲ್ಲಿ ಬಳ್ಳಾರಿ ಗಣಿ ಧಣಿಗಳಿಗೆ ಮಣ್ಣು ಮುಕ್ಕಿಸಿ ಭಾರಿ ಗೆಲುವು ಸಾಧಿಸಿರುವ ವಿ.ಎಸ್. ಉಗ್ರಪ್ಪ ಅವರಿಗೆ ಟಿಕೆಟ್ ತಪ್ಪುವುದಿಲ್ಲ ಎನ್ನುವ ಅಭಯ ಸದ್ಯ ಸಿಕ್ಕಿದೆ. ಅದೇ ರೀತಿ ಹಾಸನ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲೇಬೇಕಾಗಿದೆ. ಇದು ಸದ್ಯದ ಮಾಹಿತಿ.

ಬರಲಿದೆ ಸಂಕಟ:


ಒಂದೆಡೆ ತಾವು ಪ್ರಬಲವಾಗಿದ್ದೇವೆ ಎಂದು ಜೆಡಿಎಸ್ ಹೇಳಿಕೊಳ್ಳುವ ಕ್ಷೇತ್ರಗಳ ಪೈಕಿ ತುಮಕೂರು, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳು ಕೂಡ ಬರುತ್ತವೆ. ಇನ್ನೊಂದೆಡೆ ಇವರು ಮೈತ್ರಿ ಧರ್ಮ ಪಾಲನೆಗೆ ಮುಂದಾದರೆ ಕಾಂಗ್ರೆಸ್ ಪಕ್ಷ ಮೂರನೇ ಒಂದರಷ್ಟು ಅಂದರೆ 9 ರಿಂದ 10 ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕಾಗುತ್ತದೆ. ಮೈತ್ರಿ ಮೂಲಕ ತೆರಳಿದರೆ ಅಷ್ಟು ಕ್ಷೇತ್ರ ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಜೆಡಿಎಸ್‍ಗೆ ಕೂಡ ಇದೆ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಂಡ್ಯ, ಹಾಸನ ಕ್ಷೇತ್ರದ ಜತೆಗೆ ಬೆಂಗಳೂರು ಉತ್ತರ ಹಾಗೂ ಶಿವಮೊಗ್ಗ ಬಿಟ್ಟುಕೊಡಲು ಮಾತ್ರ ಸದ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸೀಟು ಹಂಚಿಕೆ ಸಂದರ್ಭ ತಕರಾರು ಆಗುವುದು ಸಾಮಾನ್ಯ .ಇಲ್ಲಿ ಜೆಡಿಎಸ್‍ನಷ್ಟೇ ಕಾಂಗ್ರೆಸ್ ಕೂಡ ಪ್ರಬಲವಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಜೆಡಿಎಸ್‍ಗೆ ನೆಲೆ ಇಲ್ಲ. ಅಲ್ಲಿ ಟಿಕೆಟ್ ಕೊಟ್ಟರೂ ಪ್ರಯೋಜನವಿಲ್ಲ. ಇಂತ ಕಡೆಗಳಲ್ಲಿ ಅವಕಾಶ ನೀಡಿ ಕಣ್ಣುಕಟ್ಟುವ ತಂತ್ರ ಕಾಂಗ್ರೆಸ್ ಹೆಣೆಯುತ್ತಿದೆ ಎನ್ನುವ ಅನುಮಾನ ಜೆಡಿಎಸ್‍ಗೆ ಅದಾಗಲೇ ಕಾಡಲಾರಂಭಿಸಿದೆ. ಅದಕ್ಕಾಗಿಯೇ ಇಂತಹ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲಕ್ಕೂ ಇನ್ನು ಕೆಲವೇ ದಿನದಲ್ಲಿ ಉತ್ತರ ದೊರೆಯಲಿದೆ. ಲೋಕಸಭೆ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದು, ಉಭಯ ಪಕ್ಷಗಳ ನಡುವೆ ಇನ್ನೂ ಒಂದು ಸಾರಿಯೂ ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ. ಅದ್ಯಾವಾಗ ನಡೆಯುತ್ತದೆಯೋ ಎಂದು ಆಕಾಂಕ್ಷಿಗಳು ಕೂಡ ಕಾದು ನೋಡುತ್ತಿದ್ದಾರೆ.

ABOUT THE AUTHOR

...view details