ಬೆಂಗಳೂರು :ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಸಮಗ್ರ ಮಾಸ್ಟರ್ ಪ್ಲಾನ್-2035 ರೂಪಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ತಿಳಿಸಿದ್ದಾರೆ.
ನಗರದ ಉಸ್ತುವಾರಿಯನ್ನು ಹೊಂದಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಸಂಬಂಧಿತ ಆರಂಭಿಕ ಸಭೆಯು ಮಂಗಳವಾರ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಮೊದಲ ವರ್ಚುವಲ್ ಸಭೆಯಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದ ತಜ್ಞರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಮುಂದಿನ 20-25 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡಿರುವವರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ ಎಂದರು.
ಪ್ರಸ್ತುತ ಸಿಲಿಕಾನ್ ಸಿಟಿ ಬೆಳೆಯುತ್ತಿರುವ ವೇಗ ಗಮನಿಸಿದ್ರೆ ಆತಂಕ ತರುವಂತಿದೆ. ನಾಗರಿಕರಿಗೆ ಮೂಲಸೌಕರ್ಯ ಒದಗಿಸುವುದು ಒಂದು ಬಹುದೊಡ್ಡ ಸವಾಲಿನ ಕೆಲಸ. ಬೃಹತ್ ಬೆಂಗಳೂರಿನ ವ್ಯಾಪ್ತಿಗೆ ಹೊಸ ಹೊಸ ಪ್ರದೇಶಗಳು ಸೇರ್ಪಡೆಗೊಳ್ಳುತ್ತವೆ. ಅಂತಹ ಪ್ರದೇಶಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸುವುದು ಬಿಡಿಎ, ಬಿಎಂಆರ್‌ಡಿಎ, ಬಿಬಿಎಂಪಿ ಸೇರಿ ಇನ್ನಿತರೆ ಸಂಸ್ಥೆಗಳ ಕರ್ತವ್ಯ. ಈ ದಿಸೆಯಲ್ಲಿ ಬಿಡಿಎ ನೇತೃತ್ವದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ ಎಂದರು.