ಬೆಂಗಳೂರು :ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, 84 ಸಾಕ್ಷಿಗಳನ್ನು ಪರಿಶೀಲಿಸಿದೆ. ತನಿಖೆಯಲ್ಲಿ ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ ಎಂದು ಹೈಕೋರ್ಟ್‌ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತಿಳಿಸಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಸಿಬಿಐ ದಾಖಲಿಸಿರುವ ಎಫ್‌ಐಆರ್ ವಜಾ ಮಾಡುವಂತೆ ಕೋರಿ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ನ್ಯಾಯಪೀಠಕ್ಕೆ ಸಿಬಿಐ ಪರ ವಕೀಲರು ವಿವರಿಸಿದರು.
ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಪಿ ಪ್ರಸನ್ನಕುಮಾರ್, ಸಿಬಿಐ ತನಿಖೆಯ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.
ಅರ್ಜಿದಾರರ ವಿರುದ್ಧದ ಆರೋಪ ಸಂಬಂಧ ಸಿಬಿಐ ಸ್ವತಂತ್ರವಾಗಿ 596 ದಾಖಲೆಗಳನ್ನು ಸಂಗ್ರಹಿಸಿದೆ. 84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಯಾವುದೇ ರೀತಿಯಲ್ಲೂ ತನಿಖೆ ವಿಳಂಬವಾಗಿಲ್ಲ. 2020ರ ಅಕ್ಟೋಬರ್ 3ಕ್ಕೆ ಎಫ್‌ಐಆರ್ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಶಿವಕುಮಾರ್ ಅವರು ಎಫ್‌ಐಆರ್ ವಜಾ ಕೋರಿ 2022ರ ಜುಲೈ 28ರಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವಿವರಿಸಿದರು.
ಕಾನೂನಿನ ಅನ್ವಯ ತನಿಖೆ ನಡೆದಿಲ್ಲ ಎಂಬ ಅರ್ಜಿದಾರರ ವಾದ ಸತ್ಯಕ್ಕೆ ದೂರವಾಗಿದೆ. ಪೊಲೀಸ್ ವರಿಷ್ಠಾಧಿಕಾರಿಯು ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು. ಅದೇ ರೀತಿ ಸಿಬಿಐ ಪೊಲೀಸ್ ವರಿಷ್ಠಾಧಿಕಾರಿಯು ಡಿವೈಎಸ್ಪಿ ಅವರಿಗೆ ತನಿಖೆ ನಡೆಸಲು ಅನುಮತಿಸಿದ್ದಾರೆ. ಆದ್ದರಿಂದ, ಇಲ್ಲಿ ಯಾವುದೇ ಅಕ್ರಮವಾಗಿಲ್ಲಎಂದು ಮಾಹಿತಿ ನೀಡಿದರು.