ಬೆಂಗಳೂರು:ರಾಜ್ಯದಲ್ಲಿ ಎಕ್ಸ್ಪ್ರೆಸ್ ರೈಲುಗಳು ಹೊರತು ಪಡಿಸಿ, ಪ್ಯಾಸೆಂಜರ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ. ಇದರಿಂದ ಪ್ಯಾಸೆಂಜರ್ ರೈಲುಗಳನ್ನೇ ನೆಚ್ಚಿಕೊಂಡು ರಾಜಧಾನಿಗೆ ಕೆಲಸಕ್ಕೆ ಬರುತ್ತಿದ್ದ ಲಕ್ಷಾಂತರ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿದೆ. ಕೊರೊನಾ ಲಾಕ್ಡೌನ್ ಮುನ್ನ ಸುಮಾರು 150 ರೈಲುಗಳು ಬೆಂಗಳೂರಿಗೆ ಬಂದು ಹೋಗುತಿದ್ದವು. ಇದೀಗ ಒಟ್ಟು 55 ರೈಲುಗಳು ಬೆಂಗಳೂರು ರೈಲು ನಿಲ್ದಾಣಕ್ಕೆ ಬಂದು ಹೋಗುತ್ತಿವೆ.
ಬೆಂಗಳೂರು, ರಾಮನಗರ, ತುಮಕೂರು, ಬಂಗಾರಪೇಟೆ, ಕೋಲಾರ, ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಭಾಗಗಳಿಂದ ಲಕ್ಷಾಂತರ ಪ್ರಯಾಣಿಕರು ನಗರಕ್ಕೆ ಬರುತ್ತಿದ್ದರು. ಹಾಗೂ ಕೆಲಸ ಮುಗಿಸಿ ನಂತರ ಸಂಜೆ ಅದೇ ಟ್ರೈನ್ಗಳಲ್ಲೇ ಮನೆ ಸೇರುತ್ತಿದ್ದರು. ಪ್ಯಾಸೆಂಜರ್ ರೈಲುಗಳು ಬರಲಿವೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಪ್ರಯಾಣಿಕರಿಗೆ, ಕೇಂದ್ರ ಸರ್ಕಾರ ಅನುಮತಿ ನೀಡದಿರುವುದು ನಿರಾಸೆಯನ್ನುಂಟು ಮಾಡಿದೆ.
ಪ್ಯಾಸೆಂಜರ್ ರೈಲು ಸಂಚಾರಕ್ಕೆ ಸಿಕ್ಕಿಲ್ಲ ಗ್ರೀನ್ ಸಿಗ್ನಲ್ ಪ್ಯಾಸೆಂಜರ್ ರೈಲುಗಳನ್ನು ನಗರದ ಸುತ್ತಮುತ್ತ ಭಾಗಗಳಿಂದ ನಿತ್ಯ 2 ಲಕ್ಷ ಪ್ರಯಾಣಿಕರು ಕೆಲಸಕ್ಕೆ ಬರುತ್ತಿದ್ದರು. ಆದರೆ, ಅವರೆಲ್ಲ ಇದೀಗ ರೈಲುಗಳಿಲ್ಲದೇ ಕಂಗಲಾಗಿದ್ದಾರೆ. 300 ರಿಂದ 400 ರೂಪಾಯಿ ರೈಲ್ವೆ ಪಾಸ್ ಪಡೆದು ಓಡಾಡುತ್ತಿದ್ದ ಪ್ರಯಾಣಿಕರಿಗೆ, ಬಸ್ ಪ್ರಯಾಣ ದುಸ್ತರವೆನಿಸಿದೆ. 2 ರಿಂದ 3 ಸಾವಿರ ರೂಪಾಯಿ ಕೊಟ್ಟು ಬಸ್ ಪಾಸ್ ಮಾಡಿಸಿಕೊಳ್ಳಲು ಕಷ್ಟವಾಗಿದೆ. ಪಾಸ್ ಮಾಡಿಸಿಕೊಂಡರೂ ನಗರಕ್ಕೆ ಬಂದು ಹೋಗುವುದೇ ಕಷ್ಟಕರವಾಗಿದೆ. ಇನ್ನು ಮನೆಗೆಲಸ ಮಾಡಲು ರಾಜಧಾನಿಗೆ ಬರುತ್ತಿದ್ದ ಮಹಿಳೆಯರು ಕೆಲಸವಿಲ್ಲದೇ ಅಕ್ಷರಶಃ ನಲುಗಿದ್ದಾರೆ.
ಲಾಕ್ಡೌನ್ ಮುನ್ನ ತುಮಕೂರಿನಿಂದ ಬೆಂಗಳೂರಿಗೆ ಗಂಟೆಗೊಮ್ಮೆ ರೈಲು ಸಂಚಾರವಿತ್ತು. ದಿನಕ್ಕೆ ಸುಮಾರು 10 ರೈಲುಗಳು ನಗರಕ್ಕೆ ಬಂದು ಹೋಗುತಿತ್ತು. ಈ ರೈಲುಗಳು ನಂಬಿ ಸುಮಾರು 10 ಸಾವಿರ ಪ್ರಯಾಣಿಕರು ಸಂಚರಿಸಿ ಹೋಗುತ್ತಿದ್ದರು. ರೈಲುಗಳು ಸ್ಥಗಿತಗೊಳಿಸಿದ ನಂತರ ತುಮಕೂರಿಂದ ಅನಿವಾರ್ಯವಾಗಿ ಸ್ವಂತ ವಾಹನ ಅಥವಾ ಬಸ್ ಗಳ ಮೂಲಕ ತೆರಳುವಂತಾಗಿದೆ. ಅಸಂಘಟಿತ ಕಾರ್ಮಿಕರಿಗೆ ಬಸ್ ವ್ಯವಸ್ಥೆಯೂ ಇಲ್ಲದೆ ಸ್ವಂತ ವಾಹನವೂ ಇಲ್ಲದೇ ನಗರಕ್ಕೆ ಕೆಲಸ ಬರಲು ಜನರಿಗೆ ಆಗುತ್ತಿಲ್ಲ.
ಪ್ರಯಾಣಿಕರ ಹಿತದೃಷ್ಟಿಯಿಂದ ಪ್ಯಾಸೆಂಜರ್ ರೈಲುಗಳನ್ನು ಬಿಡುತ್ತಿಲ್ಲ. ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ರೈಲುಗಳನ್ನು ಬಿಡುವ ಸಾಧ್ಯತೆಯಿದೆ.