ಬೆಂಗಳೂರು: ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದು, ಪೊಲೀಸ್ ಮಹಾನಿರ್ದೇಶಕರ ಹೊರಡಿಸಿರುವ ನಿರ್ದೇಶನವು ಕೇವಲ ಕಾಗದಕ್ಕೆ ಸೀಮಿತವಾಗಿದೆ ಮುಂದೆ ಇಂತಹ ಪ್ರಕರಣಗಳು ಮರು ಕಳಿಸಿದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ದಕ್ಷಿಣ ಜಿಲ್ಲೆಯ ಪುಂಜಾಲಕಟ್ಟೆಯ ಸಬ್ಇನ್ಸ್ಪೆಕ್ಟರ್ ಕೆ.ಪಿ. ಸುತೇಶ್ ಅವರು ತಮ್ಮ ಮೇಲೆ ಕಾನೂನುಬಾಹಿರವಾಗಿ ಹಲ್ಲೆ ನಡೆಸಿರುವುದನ್ನು ಪ್ರಶ್ನಿಸಿ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಎಚ್ಚರಿಕೆ ನೀಡಿತು.
ಪ್ರಕರಣದ ದೂರುದಾರರು ಮತ್ತು ಕುಲದೀಪ್ ಎಂಬುವರು ಮನೆ ಬಳಿಯ ಗೇಟ್ ಕುರಿತಂತೆ ಜಗಳ ಮಾಡಿಕೊಂಡಿದ್ದಾರೆ. ದೂರದಾರ ಪ್ರಭಾವಿ ಎಂಬ ಮಾತ್ರಕ್ಕೆ ಈ ರೀತಿಯಲ್ಲಿ ನಡೆದುಕೊಳ್ಳುವುದಕ್ಕೆ ಸಾಧ್ಯವೇ ಎಂದು ಪೊಲೀಸರನ್ನು ಪ್ರಶ್ನಿಸಿತು. ಜೊತೆಗೆ, ಸಿವಿಲ್ ಪ್ರಕರಣಗಳಲ್ಲಿ ಪೊಲೀಸರಿಗೇನು ಕೆಲಸ ಎಂದು ಪ್ರಶ್ನಿಸಿದ ನ್ಯಾಯಪೀಠ, ದೂರುದಾರ ಪ್ರಭಾವಿ ಎಂದ ಮಾತ್ರಕ್ಕೆ ನೀವು ಇದೆಲ್ಲಾ ಮಾಡುತ್ತೀರಾ ಎಂದು ಪೊಲೀಸರ ವಿರುದ್ಧ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು.
ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡಬಾರದು:ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡಬಾರದು. ಪೊಲೀಸ್ ಮಹಾನಿರ್ದೇಶಕರು ಮಾರ್ಗಸೂಚಿ ರೂಪಿಸಿದ ಮೇಲೆಯೂ ಪೊಲೀಸರು ಹೆಚ್ಚಾಗಿ ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪೊಲೀಸರಿಗೆ ಬಂಧಿಸುವ ಅಧಿಕಾರ ನೀಡಿದ್ದರಿಂದ ಭ್ರಷ್ಟರಾಗುವ ಅಧಿಕಾರ ನೀಡಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಉಲ್ಲೇಖಿಸಿದೆ. ಆದರೆ, ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ಒಬ್ಬ ವ್ಯಕ್ತಿಯನ್ನು ಎಳೆದಾಡುವುದು, ಬಡಿಯುವ ಕೆಲಸ ಮಾಡದಿರಿ ಎಂದು ನ್ಯಾಯಪೀಠ ತಿಳಿಸಿತು.
ಅಲ್ಲದೆ, ಕುಲದೀಪ್ ಮೇಲೆ ಪೊಲೀಸರು ಹಲ್ಲೆ ನಡೆಸಿ, ಅವರನ್ನು ರಾತ್ರಿ ಠಾಣೆಯಲ್ಲಿ ಬಂಧಿಲಾಗಿದೆ. ಅದಕ್ಕೂ ಮುನ್ನ ಚಿತ್ರಹಿಂಸೆ ನೀಡಲಾಗಿದೆ. ಇದನ್ನು ಮಂಗಳೂರಿನ ಫಾದರ್ ಮುಲ್ಲರ್ಡ್ಸ್ ಆಸ್ಪತ್ರೆಯ ವೈದ್ಯರು ಸರ್ಟಿಫಿಕೇಟ್ ಮೂಲಕ ಖಾತರಿ ಪಡಿಸಿದ್ದಾರೆ. ಸದರಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಕುಲದೀಪ್ ಮಧ್ಯಂತರ ಜಾಮೀನು ಕೋರಿದ್ದರು. ಡಿಸೆಂಬರ್ 3 ರಂದು ಅವರಿಗೆ ಜಾಮೀನು ದೊರೆತಿತ್ತು.