ಕರ್ನಾಟಕ

karnataka

ಡಿಜೆ ಹಳ್ಳಿ ಗಲಭೆ : ಕ್ಲೇಮ್​ ಕಮಿಷನರ್ ಗೆ ಒದಗಿಸಿರುವ ಸೌಲಭ್ಯಗಳ ವಿವರ ಕೇಳಿದ ಹೈಕೋರ್ಟ್

By

Published : Jan 19, 2021, 4:53 PM IST

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೇಮ್​ ಕಮಿಷನರ್ ನೇಮಕ ಮಾಡುವಂತೆ ಹಾಗೂ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

high-court
ಹೈಕೋರ್ಟ್

ಬೆಂಗಳೂರು:ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಷ್ಟ ಅಂದಾಜಿಸಿ ಹೊಣೆಗಾರಿಕೆ ನಿಗದಿಪಡಿಸಲು ನೇಮಿಸಿರುವ ಕ್ಲೇಮ್​ ಕಮಿಷನರ್ ಗೆ ಒದಗಿಸಿರುವ ಸೌಲಭ್ಯಗಳ ಕುರಿತ ವಿವರಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೇಮ್​ ಕಮಿಷನರ್ ನೇಮಕ ಮಾಡುವಂತೆ ಹಾಗೂ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನ್ಯಾಯಮೂರ್ತಿ ಹೆಚ್. ಎಸ್ ಕೆಂಪಣ್ಣ ನೇತೃತ್ವದ ಕ್ಲೇಮ್ ಕಮಿಷನರ್ ಗೆ ಅಗತ್ಯ ಸಿಬ್ಬಂದಿ ಹಾಗೂ ಕಚೇರಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಂದಿನಿಂದ ಕಮಿಷನರ್ ಕಾರ್ಯಾರಂಭ ಮಾಡಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಿಬ್ಬಂದಿ ಒದಗಿಸುವ ಸಂಬಂಧ ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಕಾರ್ಯದರ್ಶಿಯನ್ನು ನೇಮಕ ಮಾಡಿದ್ದೇವೆ ಎಂದಿದ್ದರೂ ಅವರಿಗೆ ಸೌಲಭ್ಯಗಳನ್ನು ನೀಡುವ ಕುರಿತು ವಿವರಣೆ ಇಲ್ಲ.

ಗಲಭೆ ನಡೆದು ಅರ್ಧ ವರ್ಷವಾಗುತ್ತಾ ಬರುತ್ತಿದೆ. ನಷ್ಟ ಅನುಭವಿಸಿರುವ ಜನಕ್ಕೆ ಪರಿಹಾರ ಸಿಗಬೇಕಿದ್ದರೆ ಕ್ಲೇಮ್ ಕಮಿಷನರ್ ತ್ವರಿತವಾಗಿ ಕೆಲಸ ಮಾಡಬೇಕು. ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ, ಸೌಲಭ್ಯ ನೀಡದೆ ಅವರು ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿತು. ಹಾಗೆಯೇ, ಈ ಸಂಬಂಧ ನ್ಯಾಯಾಲಯ ಆದೇಶ ಹೊರಡಿಸುವುದು ಕಷ್ಟವಲ್ಲ. ಆದರೆ, ಓರ್ವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ಸರ್ಕಾರ ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಅಲ್ಲದೇ, ಕ್ಲೇಮ್ ಕಮಿಷನರ್ ಗೆ ಕಾರ್ಯದರ್ಶಿ ಸೇರಿದಂತೆ ಅಗತ್ಯ ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ನೋಡಲ್ ಅಧಿಕಾರಿ ಮುಂದಿನ ಒಂದು ವಾರದೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.

ಓದಿ:ಉದ್ಧವ್​ ಠಾಕ್ರೆ ಮೆಂಟಲ್ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿಕೊಳ್ಳಲಿ.. ಕೃಷಿ ಸಚಿವ ಬಿ ಸಿ ಪಾಟೀಲ್ ಕಿಡಿ

For All Latest Updates

TAGGED:

ABOUT THE AUTHOR

...view details