ಕರ್ನಾಟಕ

karnataka

ETV Bharat / state

ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆ ಅಧಿಸೂಚನೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - ETV Bharat Kannada News

2020ರಿಂದ ಖಾಲಿ ಇರುವ ವಕ್ಫ್ ಮಂಡಳಿಯ ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನವನ್ನು ಭರ್ತಿ ಮಾಡುವಂತೆ ಅರ್ಜಿದಾರರು ಆಗಸ್ಟ್ 8 ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​​​ ನಿರ್ದೇಶನ ನೀಡಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Sep 5, 2023, 7:29 PM IST

ಬೆಂಗಳೂರು : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಈ ಆದೇಶದಿಂದಾಗಿ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟಿಸಲು ಇದ್ದ ಕಾನೂನು ಅಡ್ಡಿ ದೂರವಾದಂತಾಗಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ನಿವಾಸಿ ಅಬ್ದುಲ್ ಜಬ್ಬಾರ್ ಕಲಬುರಗಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆಯ ಅಧಿಸೂಚನೆ ರದ್ದುಪಡಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ಅಲ್ಲದೇ, ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

ಅಲ್ಲದೆ, 2020ರಿಂದ ಖಾಲಿ ಇರುವ ವಕ್ಫ್ ಮಂಡಳಿಯ ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನವನ್ನು ಭರ್ತಿ ಮಾಡುವಂತೆ ಅರ್ಜಿದಾರರು ಆಗಸ್ಟ್ 8ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. ನಿಗದಿಯಂತೆ ಸೋಮವಾರ (ಸೆಪ್ಟಂಬರ್ 4) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆದರೆ, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಿಸಿರಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಚಿತ್ರದುರ್ಗ ಮೂಲದ ಕೆ. ಅನ್ವರ್ ಬಾಷಾ ಅವಿರೋಧವಾಗಿ ಆಯ್ಕೆಗೊಂಡಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಕ್ಫ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾದರೆ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚನೆಯಾಗಬೇಕು. ಆದರೆ, ಮುತವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನ 2020ರ ಆ. 8 ರಿಂದ ಖಾಲಿ ಇದೆ. ಹೀಗಿದ್ದಾಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಆದ್ದರಿಂದ ಖಾಲಿ ಇರುವ ಒಂದು ಸ್ಥಾನ ಭರ್ತಿ ಮಾಡಬೇಕು ಎಂದು ಆ. 8ರಂದು ಮನವಿ ಸಲ್ಲಿಸಲಾಗಿದೆ. ಸರ್ಕಾರ ಅದನ್ನು ಪರಿಗಣಿಸಿಲ್ಲ. ಆದ್ದರಿಂದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರ ಆ. 23ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಅಲ್ಲದೆ, ಮುತುವಲ್ಲಿ ಕೋಟಾದ ಖಾಲಿ ಇರುವ ಒಂದು ಸದಸ್ಯ ಸ್ಥಾನವನ್ನು ತುಂಬಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರ ಮತ್ತು ವಕ್ಫ್ ಮಂಡಳಿ ಪರ ವಕೀಲರು, ವಕ್ಫ್ ಮಂಡಳಿಯ ಸದಸ್ಯರು ಮಾತ್ರ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ, ಅರ್ಜಿದಾರರು ವಕ್ಫ್ ಮಂಡಳಿಯ ಸದಸ್ಯರಲ್ಲ. ಹಾಗಾಗಿ ಅವರು ಅರ್ಜಿ ಸಲ್ಲಿಸುವ ಹಕ್ಕು ಹೊಂದಿಲ್ಲ. ಅಷ್ಟಕ್ಕೂ 2020ರಿಂದ ಮುತುವಲ್ಲಿ ಕೋಟಾದ ಒಂದು ಸದಸ್ಯ ಸ್ಥಾನ ಖಾಲಿ ಇದ್ದರೂ, ಆ ವಿಚಾರವನ್ನು ಈಗ ಎತ್ತಿರುವ ಅರ್ಜಿದಾರರು ಆ.8 ರಿಂದಷ್ಟೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ಇದೇ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ಸರ್ಕಾರ ಮತ್ತು ವಕ್ಫ್ ಮಂಡಳಿ ವಾದಿಸಿತ್ತು.

ಇದನ್ನೂ ಓದಿ :ಭಾನುವಾರವೂ ನಡೆದ ಹೈಕೋರ್ಟ್ ಕಲಾಪ: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮೇಲ್ಮನವಿ ವಿಚಾರಣೆ ಸೆ. 8ಕ್ಕೆ ಮುಂದೂಡಿಕೆ

ABOUT THE AUTHOR

...view details