ಬೆಂಗಳೂರು: ವಿವಾದಿತ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ದಿ (ಎಪಿಎಂಸಿ) ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಕಳೆದ ವಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ಸುಗ್ರೀವಾಜ್ಞೆಗೆ ಕಳಿಸಿ ಎಂದಿದ್ದರು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ಸಂಪುಟ ಅನುಮೋದಿತ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತನ್ನಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು.
ಎಪಿಎಂಸಿ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆ ಸಹಿ ಪ್ರತಿ ಕಾಯ್ದೆ ತಿದ್ದುಪಡಿಗೆ ರೈತಪರ ಸಂಘಟನೆಗಳು, ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿಂದೆ ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಬೇಕು. ಅದನ್ನು ಖರೀದಿ ಮಾಡುವ ವ್ಯಾಪಾರಿಗಳು ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಉತ್ಪನ್ನಗಳನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು. ಜೊತೆಗೆ 2017ರ ಮಾದರಿ ಕಾಯ್ದೆಯ ಪ್ರಕಾರ, ಆನ್‌ಲೈನ್ ಮೂಲಕ ಟೆಂಡರ್ ಖರೀದಿದಾರರು ಭಾಗವಹಿಸಲು ಅವಕಾಶವಿತ್ತು.
ಈಗ ಇದೇ ಕಾಯ್ದೆಯ 8ನೇ ಕಲಂಗೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿ ಕಾಯ್ದೆ ಪ್ರಕಾರ, ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿ ಮಾಡಬಹುದಾಗಿದೆ. ಈ ಹಿಂದೆ ಕೃಷಿ ನಿರ್ದೇಶನಾಲಯದ ಅನುಮತಿ ಅಗತ್ಯವಾಗಿತ್ತು. ಇದೀಗ ಎಂಪಿಎಂಸಿ ಒಳಗೆ ಅಥವಾ ಹೊರಗೆ ರೈತರ ಉತ್ನನ್ನಗಳನ್ನು ಖರೀದಿ ಮಾಡಲು ಯಾವುದೇ ಅನುಮತಿ ಪಡೆಯುವ ಅಗತ್ಯ ಇಲ್ಲ.
ಅದರಂತೆ ರೈತರು ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧೀನಕ್ಕೆ ಒಳಪಡುವುದಿಲ್ಲ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಬೆಳೆ ಮಾರಾಟ ಮಾಡಬಹುದು. ಹಾಗೆಯೇ ಖಾಸಗಿಯವರು ರೈತರಿಂದ ನೇರವಾಗಿ ಬೆಳೆ ಖರೀದಿಸಬಹುದಾಗಿದೆ.