ಬೆಂಗಳೂರು: ರಾಜ್ಯಪಾಲರ ಮೂಲಕ ಸರ್ಕಾರ ಭಾಷಣ ಮಾಡಿಸಿದೆ. ಸರ್ಕಾರ ಬರೆದುಕೊಟ್ಟದ್ದನ್ನೇ ಅವರು ಓದುತ್ತಾರೆ. ಭಾಷಣದಲ್ಲಿ ಸ್ಪಷ್ಟತೆ ಇರಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ನಿಲುವು, ಧ್ಯೇಯ, ಧೋರಣೆ ಬಗ್ಗೆ ಸ್ಪಷ್ಟತೆ ಇರಬೇಕು. ಸರ್ಕಾರಕ್ಕೆ ಮುಂದಿನ ಮುನ್ನೋಟ ಇರಬೇಕು. ಈ ಭಾಷಣ ನೋಡಿದಾಗ ಇದ್ಯಾವುದೂ ಕಾಣಿಸಲಿಲ್ಲ. ಇವರದ್ದು ಸುಳ್ಳಿನ ಕಂತೆ. ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದ್ದಾರೆ. ನಮ್ಮ ಸರ್ಕಾರದ ಸಾಧನೆಯನ್ನೇ ವಿವರಿಸಿದ್ದಾರೆ. ಇವರ ಸರ್ಕಾರದ ಯಾವ ಸಾಧನೆಯೂ ಇಲ್ಲ. ಗೊತ್ತು ಗುರಿ, ದೂರದೃಷ್ಟಿಯಿಲ್ಲದ ಭಾಷಣ ಎಂದು ದೂರಿದರು.
ಹಣಕಾಸು ಪರಿಸ್ಥಿತಿ ಬಗ್ಗೆ ಪ್ರಸ್ತಾಪವಿಲ್ಲ. ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ. ಎಲ್ಲದಕ್ಕೂ ಕೊರೊನಾ ನೆಪ ಹೇಳ್ತಿದ್ದಾರೆ. ಶಾಸಕರ ಅನುದಾನಕ್ಕೂ ಕೊರೊನಾ, ಅನುದಾನ ಬಿಡುಗಡೆ ಮಾಡದಿರುವುದಕ್ಕೂ ಕೊರೊನಾ, ನೀರಾವರಿ ಯೋಜನೆ ಪ್ರಸ್ತಾಪವಿಲ್ಲ, ಅಧಿಕಾರಕ್ಕೆ ಬಂದು 1 ವರ್ಷ 7 ತಿಂಗಳಾಯ್ತು. ಈ ಅವಧಿಯಲ್ಲಿ ಇವರ ಕಾರ್ಯಕ್ರಮವೇನು? ಮುಂದಿನ ದೂರದೃಷ್ಟಿಯೇನು? ಈ ಸರ್ಕಾರದ ಸಾಧನೆಯೇ ಶೂನ್ಯ. ರಾಜ್ಯದ ಪ್ರಗತಿಯ ದೂರದೃಷ್ಟಿಯಿಲ್ಲದ ಭಾಷಣ. ಇಂತಹ ಕಳಪೆ ಭಾಷಣವನ್ನು ನಾನು ನೋಡಿಯೇ ಇಲ್ಲ ಎಂದರು.
ಸದನದೊಳಗೆ ಬಿತ್ತಿಪತ್ರ ಪ್ರದರ್ಶನ ವಿಚಾರದ ಬಗ್ಗೆ ಮಾತನಾಡಿ, ಕತ್ತಿ ಪ್ರತ್ಯೇಕ ಉತ್ತರ ಕರ್ನಾಟಕ ಕೇಳ್ತಿದ್ರು. ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಸ್ತಾನೇ ಇಲ್ಲ. ಸಂಪೂರ್ಣವಾಗಿ ಅದನ್ನು ಮರೆತೇ ಬಿಟ್ಟಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿದ್ದೇಕೆ? ಉತ್ತರ ಕರ್ನಾಟಕಕ್ಕೆ ಹೇಗೆ ಮುಖ ತೋರಿಸ್ತಾರೆ. ನಾವು ಐದು ವರ್ಷವೂ ಅಲ್ಲಿ ಸದನ ಮಾಡಿದ್ದೇವೆ. ಇವರು ಎರಡು ವರ್ಷವಾದ್ರೂ ಬೆಳಗಾವಿಯಲ್ಲಿ ಮಾಡಿಲ್ಲ. ಸುವರ್ಣ ಸೌಧ ಕಟ್ಟಿಸಿದ್ದು ಯಾವ ಉದ್ದೇಶಕ್ಕೆ? ಉತ್ತರ ಕರ್ನಾಟಕಕ್ಕೆ ಆಡಳಿತ ಅಂದ್ರು. ಕಚೇರಿ ಅಲ್ಲಿಗೆ ಕೊಂಡೊಯ್ತೇವೆ ಅಂದ್ರು. ಯಾವ ಇಲಾಖೆಯನ್ನೂ ಅವರು ಶಿಫ್ಟ್ ಮಾಡಲಿಲ್ಲ. ನಾನು ಇಲಾಖೆ ಶಿಫ್ಟ್ಗೆ ಅದೇಶ ಮಾಡಿದ್ದೆ. ಸಂಪೂರ್ಣ ಉತ್ತರ ಕರ್ನಾಟಕವನ್ನೇ ಮರೆತಿದ್ದಾರೆ. ಅದಕ್ಕೆ ಇಂದು ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ ಎಂದು ಹೇಳಿದರು.