ಬೆಂಗಳೂರು:ರಾಜ್ಯ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತುರ್ತುಸ್ಥಿತಿ ಬಂದಾಗ ಮಾತ್ರ ನಮ್ಮನ್ನು ಕರೆಸುತ್ತಾರೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಂತದಲ್ಲಿ ಸರ್ಕಾರ ರೋಗಿಗಳ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯ ತೋರಿಸುತ್ತಿದೆ. ಒಂದು ಆ್ಯಂಬುಲೆನ್ಸ್ ಕಳಿಸೋಕೆ ಏಳು ತಾಸು ಬೇಕಾ? ನಾನು ಕಣ್ಣಾರೆ ನೋಡಿದ್ದೇನೆ. ಎಎಸ್ಐಗೆ ಕೊರೊನಾ ಕನ್ಫರ್ಮ್ ಆಗಿತ್ತು. ಅವರು ಆರೋಗ್ಯ ಇಲಾಖೆಗೆ ಫೋನ್ ಮಾಡಿದ್ದಾರೆ. ಆದರೆ ಅಧಿಕಾರಿಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಇಲ್ಲ. ಸರ್ಕಾರದಿಂದ ನಾವು ಇನ್ನೇನು ಊಹಿಸೋಕೆ ಸಾಧ್ಯ? ತಜ್ಞರ ಸಲಹೆಯನ್ನು ಸರ್ಕಾರ ಪರಿಗಣಿಸಬೇಕು ಎಂದರು.
ಮತ್ತೆ ಲಾಕ್ಡೌನ್ ಮಾಡಿದ್ರೂ ಇದೇ ಪರಿಸ್ಥಿತಿ ಆಗಲಿದೆ. ಲಾಕ್ಡೌನ್ ಈ ಸಮಸ್ಯೆಗೆ ಪರಿಹಾರವಲ್ಲ. ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಲಾಕ್ಡೌನ್ ಕಾಲಾವಧಿಯನ್ನು ಸರ್ಕಾರ ಬಳಸಿಕೊಳ್ಳಬೇಕಿತ್ತು. ಇದನ್ನೇ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಕೂಡ ಹೇಳಿದ್ದಾರೆ. ಆ ವೇಳೆ ಯಾವುದೇ ಪರಿಹಾರ ಕ್ರಮ ಕೈಗೊಳ್ಳದ ಅವರು, ಈಗ ನೀವೇ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎನ್ನುತ್ತಿದ್ದಾರೆ. ಜವಾಬ್ದಾರಿ ಇಲ್ಲವೆಂದರೆ ಸರ್ಕಾರ ಇರೋದಾದ್ರೂ ಏಕೆ ಎಂದು ಪ್ರಶ್ನಿಸಿದರು.
ತಜ್ಞರ ಅಭಿಪ್ರಾಯಗಳನ್ನು ಮೊದಲು ಪರಿಗಣಿಸಿ, ನಂತರ ಪಕ್ಷದ ನಿಲುವನ್ನು ನಾವು ತಿಳಿಸುತ್ತೇವೆ. ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಸರಿಯಾಗಿ ನಡೆಯುತ್ತಿಲ್ಲ. ಟೆಸ್ಟಿಂಗ್ ಮಾಡದೆ ಹೋದರೆ ನಿಯಂತ್ರಣ ಅಸಾಧ್ಯ. ವ್ಯಾಪಕ ಕೊವಿಡ್ ಪರೀಕ್ಷೆ ಆಗಬೇಕು. ಮುಂಬೈನಲ್ಲಿ ಸಾರ್ವತ್ರಿಕ ಪರೀಕ್ಷೆ ನಡೆಸಿದ್ದಾರೆ. ಅದೇ ರೀತಿ ಇಲ್ಲಿಯೂ ರ‍್ಯಾಂಡಮ್ ಟೆಸ್ಟ್ ಆಗಬೇಕು. ಲಕ್ಷಣಗಳೇ ಇಲ್ಲದವರಿಗೂ ಸೋಂಕು ಕಂಡು ಬರುತ್ತಿದೆ. ಇಂತವರಿಗೆ ಕಡಿವಾಣ ಹಾಕಬೇಕಿದೆ. ಇಂತವರು ಹೊರಗೆ ಓಡಾಡುವ ಸಾಧ್ಯತೆಯಿದೆ. ಸರ್ಕಾರ ಇದರ ಬಗ್ಗೆ ಗಂಭೀರ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.