ಬೆಂಗಳೂರು:ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಎಲ್ಲ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ವಾಹನಗಳ ಎರಡು ತಿಂಗಳ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದರಿಂದ ಕೆಲವು ವಾಹನಗಳ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಅನುಕೂಲ ಮಾಡಿಕೊಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ ..! - Vehicle Owners
ಲಾಕ್ಡೌನ್ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಯಾವುದೇ ವಾಹನಗಳು ರಸ್ತೆಗೆ ಇಳಿಯದೇ ನಿಂತಲ್ಲೇ ನಿಂತಿದ್ದವು. ಹಾಗಾಗಿ ವಾಹನಗಳ ಮೇಲಿನ ತೆರಿಗೆಯನ್ನು ಹೇಗಪ್ಪಾ ಕಟ್ಟೋದು ಎಂಬ ಚಿಂತೆಯಲ್ಲಿದ್ದ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸ್ಪಂದಿಸಲು 1,610 ಕೋಟಿ 137 ಕೋಟಿ ಹಾಗೂ 500 ರೂ.ಗಳ ಮೂರು ವಿಶೇಷ ಕೊರೊನಾ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಇದೀಗ ವಾಹನ ಮಾಲೀಕರ ನೆರವಿಗೂ ಧಾವಿಸಿದೆ. ವಿವಿಧ ವರ್ಗಕ್ಕೆ ವಿಶೇಷ ಪ್ಯಾಕೇಜ್ ನೀಡಿದಂತೆ ನಮಗೂ ತೆರಿಗೆ ಪಾವತಿ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮಾಡಿದ್ದ ಮನವಿಗೆ ಸ್ಪಂದಿಸಿದ ಸರ್ಕಾರ ಎರಡು ತಿಂಗಳ ತೆರಿಗೆ ಪಾವತಿಗೆ ವಿನಾಯಿತಿ ಪ್ರಕಟಿಸಿದೆ. ಜೊತೆಗೆ ಅಂತಾರಾಜ್ಯ ಒಪ್ಪಂದ ಮಾಡಿಕೊಂಡಿರುವ ದ್ವಿಪಕ್ಷೀಯ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಕಾಲಾವಕಾಶವನ್ನೂ ವಿಸ್ತರಣೆ ಮಾಡಿ ಆದೇಶಿಸಿದೆ.
ಸರ್ಕಾರದ ಆದೇಶ:
- ಲಾಕ್ಡೌನ್ ಅನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 16(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದಲ್ಲಿ ನೋಂದಾಯಿಸಿರುವ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ವಾಹನಗಳ ತೆರಿಗೆಯನ್ನು ದಿನಾಂಕ: 24-03-2020 ರಿಂದ 23-05-2020 ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
- ಲಾಕ್ಡೌನ್ ಅನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೋಟಾರು ವಾಹನಗಳ ಕಾಯ್ದೆ 1988 (1988ರ ಅಧಿನಿಯಮ 59) ರ ಕಲಂ 66 (3) (ಎನ್) ಮತ್ತು ಕರ್ನಾಟಕ ಮೋಟಾರು ವಾಹನ ಕಾಯ್ದೆ 1957ರ ಕಲಂ 16 (1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗೃಹ ಮಂತ್ರಾಲಯದ ಆದೇಶದ ಪ್ರಕಾರ ಕಾರ್ಮಿಕರುಗಳನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ/ಜಿಲ್ಲಾಡಳಿತ/ಅಧಿಕೃತ ಪ್ರಾಧಿಕಾರಗಳಿಂದ ಅನುಮತಿ ಪಡೆದು ಇತರ ರಾಜ್ಯದ ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆ 1988 ಕಲಂ 66 (1) ರಡಿಯಲ್ಲಿ ರಹದಾರಿಗಳಿಂದ ವಿನಾಯಿತಿ ನೀಡಿ ಮತ್ತು ದಿನಾಂಕ: 30-06-2020 ರವರೆಗೆ ಪಾವತಿಸಬೇಕಾದ ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ನೀಡಿ ಆದೇಶಿಸಿದೆ.
- ಲಾಕ್ಡೌನ್ ಅನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 4(1) ರ ನಿಯಮಗಳನ್ನು ಸಡಿಲಗೊಳಿಸಿ ನೆರೆ ರಾಜ್ಯಗಳಲ್ಲಿ ನೋಂದಣಿಯಾಗಿ, ಅಂತಾರಾಜ್ಯ ಒಪ್ಪಂದದಡಿಯಲ್ಲಿ ಮೇಲು ಸಹಿ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ಅನ್ವಯಿಸುವಂತೆ ದಿನಾಂಕ: 15-04-2020 ರೊಳಗೆ ಪಾವತಿಸಬೇಕಿದ್ದ ದ್ವಿಪಕ್ಷೀಯ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ: 01-06-2020 ರವರೆಗೆ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ.