ಬೆಂಗಳೂರು:ಹೆಂಡತಿಗೆ ವಿಚ್ಛೇದನ ನೀಡಲು ಅಡ್ಡಿಪಡಿಸಿದ ಮಗಳನ್ನೇ ತಂದೆಯೇ ಸಹಚರರ ಮೂಲಕ ಸುಪಾರಿ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಂಕರಪುರ ನಿವಾಸಿಯಾಗಿರುವ ರಿಯಾ ಆರ್. ಸಂಚೇತಿ ಎಂಬುವರು ತಂದೆ ರವಿ ಸಂಜೇತಿ ವಿರುದ್ಧ ದೂರು ನೀಡಿದ್ದಾರೆ. ಇದೇ ತಿಂಗಳು 24ರಂದು ರಿಯಾ ತನ್ನ ಸ್ನೇಹಿತರೊಂದಿಗೆ ಬಸವನಗುಡಿಯಿಂದ ಹೆಣ್ಣೂರು ಮಾರ್ಗವಾಗಿ ಕಾರಿನಲ್ಲಿ ಪಾಟರಿ ರೋಡ್ ತಲುಪುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಕಾರ್ ಬಳಿ ಬಂದಿದ್ದಾನೆ. ಈತನನ್ನು ಕಂಡು ಯುವತಿ ಕಾರ್ ಗ್ಲಾಸ್ ಇಳಿಸಿದ್ದಾಳೆ. ಹತ್ತಿರ ಬಂದು ಏಕಾಏಕಿ ಕೂದಲು ಹಿಡಿದು ಎಳೆದಾಡಿ, ನೋಡ ನೋಡುತ್ತಿದ್ದಂತೆ ಕಾರಿನ ಗಾಜಿಗೆ ಕಲ್ಲಿನಿಂದ ಹೊಡೆದು ಹಾನಿಗೊಳಿಸಿದ್ದಾನೆ. ಘಟನೆ ಬಳಿಕ ಆತ ಅಲ್ಲಿಂದ ಓಡಿ ಹೋಗಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದುಕೊಂಡಿದ್ದಾರೆ. ಹಲ್ಲೆ ಬಗ್ಗೆ ಪ್ರಶ್ನಿಸಿದಾಗ ನನ್ನನ್ನೂ ಏನೂ ಕೇಳಬೇಡಿ, ನಿಮ್ಮ ತಂದೆಯನ್ನು ಕೇಳಿ ಎಂದಿದ್ದಾನೆ. ಅವರೇ ನನಗೆ ಹೀಗೆ ಮಾಡಲು ತಿಳಿಸಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.