ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಲಾಜಿಲ್ಲದೇ ಒತ್ತುವರಿ ತೆರವು ಕಾರ್ಯ ಮುಂದುವರೆದಿದೆ. ಮತ್ತೊಂದೆಡೆ ಇದೇ ವಾರದೊಳಗೆ ವಿಐಪಿಗಳ 13 ವಿಲ್ಲಾಗಳನ್ನು ಕೆಡವಲು ಕಂದಾಯ ಇಲಾಖೆ ಆದೇಶಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.
ಸರ್ಜಾಪುರ ರಸ್ತೆಯ ರೈನ್ ಬೋ ಲೇಔಟ್‌ನಲ್ಲಿ ಎರಡು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ 13 ವಿಲ್ಲಾಗಳನ್ನು ಕೆಡವಲು ಕೆಆರ್ ಪುರಂ ತಹಶೀಲ್ದಾರ್ರ ಅಧಿಕೃತ ಆದೇಶಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಕಾಯುತ್ತಿದ್ದಾರೆ.
35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ರೈನ್ ಬೋ ಲೇಔಟ್ ನಾಲ್ಕು ಬಾರಿ ಪ್ರವಾಹಕ್ಕೆ ಸಾಕ್ಷಿಯಾಗಿದೆ. 2014 ರಲ್ಲಿ ಅಂದಿನ ಕೆಆರ್ ಪುರಂ ತಹಶೀಲ್ದಾರ್ ಅವರು ಹಾಲನಾಯಕನಹಳ್ಳಿ ಕೆರೆಗೆ ಹೋಗುವ ಈ ಲೇಔಟ್‌ನಲ್ಲಿ ಎರಡು ಮಳೆ ನೀರು ಚರಂಡಿ ಮೇಲೆ ಕಟ್ಟಿದ ಸುಮಾರು 40 ಮನೆಗಳನ್ನು ಕೆಡವಲು ಆದೇಶಿಸಿದ್ದರು. ಆದರೆ, ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.