ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ರನ್ನು ನೇಮಿಸಲಾಗಿದೆ. ಕೇಂದ್ರ ಸಚಿವ ಹಾಗೂ ರಾಜ್ಯಸಭಾ ನಾಯಕರಾಗಿರುವ ಗೆಹ್ಲೋಟ್ಗೆ ರಾಜ್ಯಪಾಲ ಹುದ್ದೆ ನೀಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ವಜುಭಾಯ್ ವಾಲಾ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸೇವಾವಧಿ ಮುಗಿದ ಹಿನ್ನೆಲೆ ಗೆಹ್ಲೋಟ್ ಅವರನ್ನು ನೂತನ ರಾಜ್ಯಪಾಲರಾಗಿ ಗೆಹ್ಲೋಟ್ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ, ಪಕ್ಷವಾರು ಪ್ರಾತಿನಿಧ್ಯದ ನೆಲೆಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಅದರ ಭಾಗಿವಾಗಿಯೇ ರಾಜ್ಯಪಾಲರ ಹುದ್ದೆಗೆ ನೇಮಕಗಳು ನಡೆದಿವೆ ಎನ್ನಲಾಗುತ್ತಿದೆ.
ಇದೇ ವಾರದಲ್ಲಿ ಕೇಂದ್ರ ಸಚಿವ ಸಂಪುಟ ಪುನರ್ರಚನೆಯಾಗಲಿದ್ದು, ಕೇಂದ್ರ ಸಚಿವರಾಗಿರುವ ಥಾವರ್ ಚಂದ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಮಧ್ಯಪ್ರದೇಶದ ಹಿರಿಯ ರಾಜಕಾರಣಿ, 73 ವರ್ಷ ವಯಸ್ಸಿನ ಥಾವರ್ ಚಂದ್ ಗೆಹ್ಲೋಟ್, ಈ ಹಿಂದೆ ಮೂರು ಬಾರಿ ಮಧ್ಯಪ್ರದೇಶದ ಶಾಜಾಪುರ ಮೀಸಲು ಕ್ಷೇತ್ರದ ಶಾಸಕರಾಗಿದ್ದರು. ನಾಲ್ಕು ಬಾರಿ ಲೋಕಸಭಾ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ರಾಜ್ಯಸಭಾ ಸಂಸದರಾಗಿದ್ದು, ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.