ಬೆಂಗಳೂರು: ಕಡೆಗೂ ಇಂದಿರಾ ಕ್ಯಾಂಟೀನ್ ನಿರ್ವಹಣೆ ಕೆಲಸ ಚುರುಕುಗೊಂಡಿದ್ದು ಇನ್ನೊಂದು ವಾರದಲ್ಲಿ ಬಿಬಿಎಂಪಿ ಗುತ್ತಿಗೆದಾರರನ್ನು ಅಂತಿಮಗೊಳಿಸಲಿದೆ.
ಇಂದಿರಾ ಕ್ಯಾಂಟೀನ್ ಟೆಂಡರ್ ಒಂದು ವಾರದಲ್ಲಿ ಅಂತಿಮ
ಇಂದಿರಾ ಕ್ಯಾಂಟೀನ್ ಟೆಂಡರ್‌ಗೆ ಸಂಬಂಧಿಸಿದಂತೆ ಇನ್ನೊಂದು ವಾರದಲ್ಲಿ ಬಿಬಿಎಂಪಿ ಗುತ್ತಿಗೆದಾರರನ್ನು ಅಂತಿಮಗೊಳಿಸಲಿದೆ.
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತ ಪಕ್ಷ ಬದಲಾದ ಕೂಡಲೇ ಇಂದಿರಾ ಕ್ಯಾಂಟೀನ್ ತೀವ್ರ ಹಣಕಾಸು ಸಮಸ್ಯೆ ಎದುರಿಸಿತ್ತು. ಬಡ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಉಪಹಾರ, ಊಟ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಕಡೆಗಣಿಸಲ್ಪಟ್ಟಿತ್ತು. ಆಗಸ್ಟ್ನಲ್ಲೇ ಶೆಫ್ ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆ ಗುತ್ತಿಗೆ ಅವಧಿ ಮುಗಿದರೂ ಅವರನ್ನೇ ಮುಂದುವರಿಸಲಾಗಿತ್ತು. ಇದೀಗ ಹೊಸ ಟೆಂಡರ್ ಕರೆದಿರುವ ಬಿಬಿಎಂಪಿ ಇನ್ನೊಂದು ವಾರದಲ್ಲಿ ಗುತ್ತಿಗೆದಾರರನ್ನು ಅಂತಿಮಗೊಳಿಸಲಿದೆ. ಆರು ಸಂಸ್ಥೆಗಳು ಟೆಂಡರ್ ನಲ್ಲಿ ಭಾಗವಹಿಸಿದ್ದು, ರಿವಾರ್ಡ್ಸ್ ಹಾಗೂ ಶೆಫ್ ಟಾಕ್ ಹಳೇ ಗುತ್ತಿಗೆದಾರರೇ ಆಗಿದ್ದಾರೆ.
ಹೊಸದಾಗಿ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ನಡೆಸುತ್ತಿರುವ ಅದಮ್ಯ ಚೇತನ ಸಂಸ್ಥೆ ಹಾಗೂ ಮಾನವ ಸಂಪನ್ಮೂಲ ಸಂಸ್ಥೆ ಕೂಡಾ ಬಿಡ್ ಮಾಡಿದೆ. ಈ ಸಂಸ್ಥೆಗಳ ಇವ್ಯಾಲ್ಯ್ವೇಷನ್ ಕೆಲಸ ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದು, ಡಿಸೆಂಬರ್ 17 ರ ಒಳಗೆ ಅಂತಿಮಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಮಾಹಿತಿ ನೀಡಿದರು. ಈ ಬಾರಿ ವಲಯವಾರು ವಿಂಗಡನೆ ಮಾಡಲಾಗಿದ್ದು, ಆ ಪ್ರಕಾರ ಟೆಂಡರ್ ನೀಡಲಾಗುತ್ತದೆ. ಹೊಸ ಮೆನುವಿನ ಬಗ್ಗೆ ಇನ್ನೂ ನಿರ್ಧಾರ ಅಂತಿಮಗೊಂಡಿಲ್ಲ ಎಂದು ಅವರು ತಿಳಿಸಿದರು. ಆದ್ರೆ ಅದಮ್ಯ ಚೇತನ ಸಂಸ್ಥೆಗೆ ಆಡಳಿತ ಪಕ್ಷ ಬಿಜೆಪಿ ಬೆಂಬಲ ಇದ್ದು, ಟೆಂಡರ್ ನೀಡುವಾಗ ಪಾರದರ್ಶಕತೆ ಕಾಪಾಡಬೇಕು. ಅರ್ಹರಾಗಿದ್ದರೆ ಮಾತ್ರ ಟೆಂಡರ್ ನೀಡಬೇಕು ಎಂಬ ಕೂಗೂ ಪಾಲಿಕೆ ವಲಯದಲ್ಲಿ ಕೇಳಿ ಬಂದಿದೆ.