ಬೆಂಗಳೂರು: ಮೇ ತಿಂಗಳಲ್ಲಿ ಎರಡನೇ ಅಲೆ ಕೋವಿಡ್ ಪ್ರಮಾಣ ಗರಿಷ್ಠ ಮಟ್ಟ ತಲುಪಲಿದ್ದು, ಹೆಚ್ಚಿನ ಕ್ರಮ ಕೈಗೊಳ್ಳುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸೂಚನೆ ನೀಡಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಜತೆ ಕೊರೊನಾ ಎರಡನೇ ಅಲೆ ಸ್ಥಿತಿಗತಿ ಸಂಬಂಧ ತುರ್ತು ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಎರಡನೇ ಅಲೆ ಕೋವಿಡ್ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಹೇಗೆ ನಿಯಂತ್ರಿಸಬೇಕು, ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆಯಾಗಿದೆ ಎಂದರು.
ಕೋವಿಡ್ ಆರ್ಭಟ:
ತಾಂತ್ರಿಕ ಸಲಹಾ ಸಮಿತಿ ಪರಿಣಿತರು ಕೋವಿಡ್ ಪ್ರಮಾಣ ಮುಂದೆ ಎಷ್ಟು ಹೆಚ್ಚಾಗಬಹುದು ಅಂತಾ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೆಲ ನಿರ್ದಿಷ್ಟ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. 80-120 ದಿನಗಳ ಕಾಲ ಈ ಎರಡನೇ ಅಲೆ ಆರ್ಭಟಿಸಲಿದೆ. ಹಾಗಾಗಿ ಮೇ ತಿಂಗಳಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು ಅಂತಾ ಸೂಚನೆ ನೀಡಿದ್ದಾರೆ. ಕೋವಿಡ್ ಸೋಂಕಿತರ ಪ್ರಮಾಣ ಮೇ ಮೊದಲ ವಾರದಲ್ಲಿ ಹೆಚ್ಚಿದ್ದು, ಕೊನೆಯಲ್ಲಿ ಕಡಿಮೆಯಾಗಬಹುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಮನೆಯಲ್ಲಿ ಐಸೋಲೇಟ್ ಆಗುವವರ ಮೇಲೆ ನಿಗಾ ಇಡುವ ಬಗ್ಗೆ ಚರ್ಚೆ ನಡೆದಿದೆ. ಯುಗಾದಿ ಹಬ್ಬ ಬರುತ್ತಿದ್ದು, ಬೆಂಗಳೂರಿನಿಂದ ಊರಿಗೆ ಹೋಗುವಾಗ ಸೋಂಕು ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಮೊದಲ ಅಲೆಯ ಸಂದರ್ಭದಲ್ಲೂ ಇದೇ ರೀತಿ ಆಗಿತ್ತು. ಈ ಅಪಾಯ ಇರೋದ್ರಿಂದ ಸರ್ಕಾರ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ ಎಂದರು.
ಅನ್ಯ ರಾಜ್ಯದಿಂದ ಬರುವವರ ಕೋವಿಡ್ ನೆಗೆಟಿವ್ ರಿಪೋರ್ಟ್ ನೋಡಿಯೇ ಬಿಡುವಂತೆ ಸೂಚಿಸಿದ್ದಾರೆ. ಸಲಹೆಗಳನ್ನು ವರದಿ ರೀತಿಯಲ್ಲಿ ನೀಡುವಂತೆ ನಾನು ಸೂಚಿಸಿದ್ದೇನೆ. ಆ ವರದಿಯನ್ನು ಸಿಎಂ ಮುಂದೆ ಇಟ್ಟು, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ವೈಜ್ಞಾನಿಕ ರೀತಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಮೆಡಿಸಿನ್ ಖರೀದಿಗೆ ಸೂಚಿಸಿದ್ದು, ಇದಕ್ಕೆ ಒಪ್ಪಿದ್ದೇವೆ. ಟೆಲಿಬೈಸಿಯು ನಾವೇ ಮೊದಲು ಆರಂಭಿಸಿದ್ದೇವೆ. ಕೊಲಂಬಿಯಾ ಏಷ್ಯಾ, ಮಣಿಪಾಲ್ ಆಸ್ಪತ್ರೆಯಲ್ಲಿ ಉಚಿತ ಸೇವೆ ನೀಡಿದ್ದಾರೆ. ಇದನ್ನು ಮುಂದುವರೆಸಲು ಮನವಿ ಮಾಡಿದ್ದೇವೆ ಎಂದರು.