ಬೆಂಗಳೂರು: ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ ನಂತರ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ (ಒಸಿ) ನೀಡಿದ ನಂತರವೇ ಆ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೆಸರ್ಸ್ ಬಿ.ಎಂ.ಹ್ಯಾಬಿಟೇಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಹೊರಹಾಕಿತು.
ಸ್ವಾಧೀನಾನುಭವ ಪತ್ರ ನೀಡುವ ಮುನ್ನವೇ ಹಿಂದಿನ ದಿನಾಂಕದಿಂದ ತೆರಿಗೆ ಪಾವತಿಸುವಂತೆ ಪಾಲಿಕೆ ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ. 2011ರ ಏ.25ರಿಂದ ಅನ್ವಯವಾಗುವಂತೆ ಅರ್ಜಿದಾರರಿಂದ ತೆರಿಗೆ ಸ್ವೀಕರಿಸುವಂತೆ ಸೂಚಿಸಿದೆ. ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠವು, 2010ರಲ್ಲಿ ಕಟ್ಟಡಕ್ಕೆ ಎನ್‌ಒಸಿ ವಿತರಿಸಲಾಗಿದೆ. ಹಾಗಾಗಿ ಅರ್ಜಿದಾರರು ಆ ಮಾಲ್ ಅನ್ನು ಬಳಕೆ ಮಾಡಿಲ್ಲ. ಅರ್ಜಿದಾರರು ಒಸಿಗಾಗಿ ಮನವಿ ಸಲ್ಲಿಸಿದ್ದರೂ ಪಾಲಿಕೆ ಸಕಾಲದಲ್ಲಿ ಪರಿಗಣಿಸದೆ ವಿಳಂಬಿಸಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಒಸಿ ವಿತರಣೆ ನಂತರವೇ ತೆರಿಗೆ ವಿಧಿಸಬಹುದೇ ಹೊರತು ಮುಂಚಿತವಾಗಿ ಅಲ್ಲ. ಹಾಗಾಗಿ ಬಿಬಿಎಂಪಿಯ ನೋಟಿಸ್ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಟ್ಟಡ ನಿರ್ಮಾಣ ಕಾರ್ಯವನ್ನು 2010ರಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ಮಲ್ಟಿಪೆಕ್ಸ್ ನಡೆಸಲು ಜಿಲ್ಲಾಧಿಕಾರಿಗಳು ಎನ್‌ಒಸಿ ವಿತರಿಸುವುದು ಮತ್ತು ಆಗ್ನಿಶಾಮಕ ದಳದ ಅನುಮೋದನೆ ಸಿಗುವುದು ತಡವಾಗಿದೆ. 2010ರ ಜು.5ರಂದು ಸ್ವಾಧೀನಾನುಭವ ಪತ್ರ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಅದನ್ನು ಪಾಲಿಕೆ ಪರಿಗಣಿಸಿರಲಿಲ್ಲ. ಹಾಗಾಗಿ 2010ರ ಡಿ.2ರಂದು ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.