ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 154ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1900 ಕ್ಕೂ ಹೆಚ್ಚು ಸ್ಥಳಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಇಂದು ಸ್ವಚ್ಛತಾ ಹೀ ಸೇವಾ ಶ್ರಮದಾನ (ಒಂದು ಗಂಟೆ ಸ್ವಚ್ಛತೆಗಾಗಿ ಶ್ರಮದಾನ) ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಸ್ವಚ್ಛ ಸರ್ವೇಕ್ಷಣ್-2023 ಅನುಸರಣೆಗಾಗಿ ಬಿಬಿಎಂಪಿಯ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಎನ್‌ಜಿಒ, ಎಸ್‌ಎಚ್‌ಜಿ, ಎನ್‌ಎಸ್‌ಎಸ್ ಅಥವಾ ಎನ್‌ಸಿಸಿ ಕೆಡೆಟ್‌ಗಳು, ಆರ್‌ಡಬ್ಲ್ಯುಎ, ಸ್ವಯಂ ಸೇವಕರು, ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿದರು.
ಅದರಲ್ಲೂ, ನಗರದಾದ್ಯಂತ ಜಲಮೂಲಗಳು, ರೈಲ್ವೆ ಹಳಿಗಳು, ರಸ್ತೆ ಬದಿ, ಸೇತುವೆಯ ಕೆಳಗೆ, ಮೇಲ್ಸೇತುವೆ ಕೆಳಗೆ, ಕೊಳೆಗೇರಿ ಪ್ರದೇಶಗಳು, ಮಾರುಕಟ್ಟೆ ಸ್ಥಳಗಳು, ಆರಾಧನೆ ಸ್ಥಳಗಳು, ಪ್ರವಾಸಿ ಸ್ಥಳ, ಬಸ್ ನಿಲ್ದಾಣಗಳು, ಶಾಲಾ, ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶ, ಆರೋಗ್ಯ ಸಂಸ್ಥೆಗಳ ಸ್ಥಳಗಳಲ್ಲಿ ತ್ಯಾಜ್ಯವನ್ನು ನಿರ್ಮೂಲನೆ ಮಾಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಬೆಂಗಳೂರು ನಗರಕ್ಕಿರುವ 'ಉದ್ಯಾನ ನಗರಿ' ಎಂಬ ಖ್ಯಾತಿಯನ್ನು ಮರಳಿ ತರಲು ಸ್ವಚ್ಛ, ನೈರ್ಮಲ್ಯ ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಹಸಿರನ್ನು ಕಾಪಾಡಿಕೊಳ್ಳುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
ಅಭಿಯಾನದ ಮಾಹಿತಿ ವೆಬ್‌ಸೈಟ್‌ನಲ್ಲಿ: ಬಿಬಿಎಂಪಿ ವ್ಯಾಪ್ತಿಯ ಒಟ್ಠಾರೆ 1260 ಸ್ಥಳಗಳ - ಪ್ರತಿ ವಾರ್ಡ್‌ನಲ್ಲಿ ಜರುಗುವ ಅಭಿಯಾನದ ಸ್ಥಳಗಳನ್ನು ಸ್ವಚ್ಛತಾ-ಹೀ-ಸೇವಾ (swachhatahiseva.com) ವೆಬ್ ಪೋರ್ಟಲ್ ಹಾಗೂ ಪಾಲಿಕೆಯ ವೆಬ್ ಸೈಟ್(bbmp.gov.in) ನಲ್ಲಿ ನಮೂದಿಸಿರುವುದು ವಿಶೇಷವಾಗಿದೆ.