ಬೆಂಗಳೂರು:ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಜತೆ ದೂರವಾಣಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ.
‘ನೀವೇನು ಭಯ ಪಡಬೇಡಿ, ಎಲ್ಲವೂ ಇತ್ಯರ್ಥವಾಗುತ್ತೆ’: ಡಿಕೆಶಿಗೆ ಸುರ್ಜೇವಾಲಾ ಅಭಯ - ದೂರವಾಣಿ ಮೂಲಕ ಡಿಕೆಶಿ, ಸುರ್ಜೆವಾಲಾ ಚರ್ಚೆ
ಬೆಂಗಳೂರು ರಾಜ್ಯದಲ್ಲಿ ಬೈ ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂದರ್ಭ ಡಿಕೆಶಿ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಮಾತುಕತೆ ನಡೆಸಿದ್ದು, ಪಕ್ಷ ನಿಮ್ಮ ಜತೆಗಿದೆ ಭಯ ಪಡಬೇಡಿ ಎಂದು ಅಭಯ ನೀಡಿದ್ದಾರೆ.
ಶಿರಾ ಹಾಗೂ ಆರ್.ಆರ್.ನಗರ ಉಪಚುನಾವಣೆಗೆ ಅಭ್ಯರ್ಥಿ ಪಟ್ಟಿಯನ್ನ ಶೀಘ್ರವಾಗಿ ಅಂತಿಮಗೊಳಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ನಿನ್ನೆ ನಡೆದ ಸಿಬಿಐ ದಾಳಿಯ ಬಗ್ಗೆಯೂ ಚರ್ಚಿಸಲಾಗಿದೆ. ‘ನೀವೇನು ಭಯ ಪಡಬೇಡಿ, ಎಲ್ಲವೂ ಇತ್ಯರ್ಥವಾಗುತ್ತೆ, ಇದು ರಾಜಕೀಯ ಪ್ರೇರಿತವಾಗಿದ್ದು, ನಿಮ್ಮ ಜತೆ ಪಕ್ಷವಿದೆ’ ಎಂದು ಡಿಕೆಶಿಗೆ ಸುರ್ಜೇವಾಲಾ ಧೈರ್ಯ ತುಂಬಿದ್ದಾರೆ ಎನ್ನಲಾಗ್ತಿದೆ.
ನಿನ್ನೆ ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಅವರ ಸಹೋದರ ಮತ್ತು ಸಂಸದ ಡಿ ಕೆ ಸುರೇಶ್ ಮನೆ ಸೇರಿದಂತೆ 14 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಕೆಲ ದಾಖಲಾತಿಗಳ ಪರಿಶೀಲನೆ ನಡೆಸಿದ ಬಳಿಕ 57 ಲಕ್ಷ ರೂಪಾಯಿ ಅಕ್ರಮ ಹಣವನ್ನು ವಶಕ್ಕೆ ಪಡೆದಿರುವುದಾಗಿ ಸಿಬಿಐ ಪ್ರಕಟಣೆ ಹೊರಡಿಸಿತ್ತು.