ಬೆಂಗಳೂರು: ಶಾಲಾ ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆಗಳು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯಲು ಬಿಜೆಪಿ ಸರ್ಕಾರ ಆರಂಭಿಸಿದ್ದ ವಾಟರ್ ಬೆಲ್ ಯೋಜನೆಯನ್ನು ಸಮರ್ಥವಾಗಿ ಸಮಗ್ರವಾಗಿ ಮರು ಜಾರಿಗೊಳಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಕೇರಳ ಸರ್ಕಾರವು ಶಾಲೆಗಳಲ್ಲಿ 'ವಾಟರ್ ಬೆಲ್' ಪರಿಕಲ್ಪನೆಯನ್ನು ಮರುಜಾರಿಗೊಳಿಸಿದೆ ಎನ್ನುವ ಮಾಧ್ಯಮ ವರದಿಗಳನ್ನು ಗಮನಿಸಿದ್ದೇನೆ. ಇದು ನಮ್ಮ ವಿದ್ಯಾರ್ಥಿಗಳ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸರ್ಕಾರಿ ಶಾಲೆಗಳ ಮಕ್ಕಳ ಉತ್ತಮ ಆರೋಗ್ಯದ ದೃಷ್ಟಿಯಿಂದ ನಮ್ಮ ಸರ್ಕಾರವು ಆದ್ಯತೆಯ ಕ್ರಮವಾಗಿ ಕಾಣಬೇಕಾದ ವಿಷಯವಾಗಿದೆ. ಈ ಪ್ರಯೋಗವನ್ನು ನಾನು 2019 ರಲ್ಲಿ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿಯೇ ಕೈಗೊಂಡಿದ್ದೆ.
ಶಾಲಾ ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆಗಳು (ನೀರು ಕುಡಿಯದೇ ಆಗುವ ಪರಿಣಾಮ) ಅವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಷಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳ ಮೇಲೆ ಈ ನಿರ್ಜಲೀಕರಣದ ಪರಿಣಾಮಗಳನ್ನು ಕಡಿಮೆ ಮಾಡಬೇಕಾದರೆ ಸರ್ಕಾರದ ಹೆಚ್ಚಿನ ಮುತುವರ್ಜಿ ಅವಶ್ಯಕವೆಂದು ಭಾವಿಸಿ ಪ್ರತಿಯೊಂದು ಶಾಲೆಯಲ್ಲಿ ನಿಗದಿತ ಅವಧಿಗೆ ಮಕ್ಕಳು ನೀರು ಕುಡಿಯುವುದನ್ನು ನೆನಪಿಸಲು 'ವಾಟರ್ ಬೆಲ್' ಮೊಳಗಿಸಬೇಕೆಂದು ಎಲ್ಲ ಶಾಲೆಗಳಿಗೆ ಸುತ್ತೋಲೆ ನೀಡಲಾಗಿತ್ತು. ಈ ಕಾರ್ಯಕ್ರಮ ಪ್ರಸ್ತುತ ಎಷ್ಟು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ ಎನ್ನುವ ಕುರಿತು ತಾವು ಇನ್ನೊಮ್ಮೆ ಸುದೀರ್ಘ ಪರಾಮರ್ಶೆ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದಾರೆ.