ಕರ್ನಾಟಕ

karnataka

ETV Bharat / state

'ಮುಂದಿನ 6 ತಿಂಗಳು ಜನ‌ರಿಗೆ ಕತ್ತಲೆ ಭಾಗ್ಯ': ಮಾಜಿ ಸಚಿವ ಸುನೀಲ್ ಕುಮಾರ್ - Sunil Kumar

ವಿದ್ಯುತ್​ ಅಭಾವದ ಕುರಿತು ಮಾಜಿ ಸಚಿವ ಸುನೀಲ್ ಕುಮಾರ್ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

Sunil Kumar
ಮಾಜಿ ಸಚಿವ ಸುನೀಲ್ ಕುಮಾರ್

By ETV Bharat Karnataka Team

Published : Oct 10, 2023, 4:55 PM IST

ಬೆಂಗಳೂರು: ಮುಂದಿನ ಆರು ತಿಂಗಳು ಜನ ಕತ್ತಲೆಯ ಭಾಗ್ಯ ಅನುಭವಿಸಬೇಕಾಗುತ್ತದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಧಾನ ಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೆ ವಿದ್ಯುತ್ ಕೊಡಲಾಗದಷ್ಟು ಅಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಸಂಪೂರ್ಣ ಲೋಡ್ ಶೆಡ್ಡಿಂಗ್ ಮಾಡಲಾಗ್ತಿದೆ. ಸರ್ಕಾರ ಈ ಮೊದಲೇ ಎಚ್ಚೆತ್ತುಕೊಳ್ಳಲಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕತ್ತಲೆಯ ದಿನಗಳು ಬರಲಿವೆ. ಲೋಡ್ ಶೆಡ್ಡಿಂಗ್ ವಾತಾವರಣ ಕಳೆದ ಹತ್ತು ವರ್ಷಗಳಿಂದ ಇರಲಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದರು.

ವಿದ್ಯುತ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಕಳೆದ ತಿಂಗಳೇ ನಾನು ಸುದ್ದಿಗೋಷ್ಟಿ ನಡೆಸಿ ರಾಜ್ಯಕ್ಕೆ ಕತ್ತಲೆ ಭಾಗ್ಯ ಬರಲಿದೆ ಎಂದು ತಿಳಿಸಿದ್ದೆ. ಅದು ಈಗ ನಿಜವಾಗ್ತಿದೆ. ರೈತರಿಗೆ ಒಂದು ಗಂಟೆಯೂ ವಿದ್ಯುತ್ ಕೊಡದೇ ಅಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ. ಡಿಸೆಂಬರ್, ಜನವರಿ ಹೊತ್ತಿಗೆ ಎಸ್ಕಾಂಗಳ ನೌಕರರಿಗೆ ವೇತನಕ್ಕೂ ಸಮಸ್ಯೆ ಆಗಲಿದೆ. ವಿದ್ಯುತ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಏಳು ಗಂಟೆ ವಿದ್ಯುತ್ ಕೊಡಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.

ಮೈತ್ರಿ- ಹೈಕಮಾಂಡ್ ನಿರ್ಣಯಕ್ಕೆ ಬದ್ಧ: ಮೈತ್ರಿ ವೇಳೆ ನಮ್ಮನ್ನು ಪರಿಗಣಿಸಲಿಲ್ಲ ಎಂಬ ಡಿವಿಎಸ್ ಹೇಳಿಕೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ಧ. ಮೈತ್ರಿ ಬಗ್ಗೆ ಎಲ್ಲವೂ ಕೂಡಾ ಪ್ರಾಥಮಿಕ ಹಂತದಲ್ಲಿದೆ. ಹೈಕಮಾಂಡ್ ಖಂಡಿತ ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಮಹಿಷ ದಸರಾಗೆ ವಿರೋಧ:ಮಹಿಷ ದಸರಾಗೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಮೈಸೂರು ದಸರಾದಲ್ಲಿ ಕರ್ನಾಟಕ, ಕನ್ನಡದ ಸಂಸ್ಕೃತಿ ವಿಜೃಂಭಿಸಬೇಕು. ಮೈಸೂರು ಒಡೆಯರ್ ಆಡಳಿತ ಜನರಿಗೆ ಇನ್ನಷ್ಟು ನೆನಪಿಗೆ ಬರುವಂತಿರಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ಉರ್ದು ಕವಿಗೋಷ್ಟಿ ಆಯೋಜಿಸುತ್ತಿದೆ. ಮಹಿಷಾಸುರನ ದಸರಾ ಆಚರಣೆಗೆ ಪರೋಕ್ಷ ಬೆಂಬಲವನ್ನು ಸರ್ಕಾರ ಕೊಡುತ್ತಿದೆ. ಟಿಪ್ಪುವಿನ ನೆನಪನ್ನು ಈ ಮೂಲಕ‌ ಈ ಸರ್ಕಾರ ನೆನಪು ಮಾಡಿಕೊಳ್ತಿದೆ. ನಾವು ಮಹಿಷಾಸುರನ ದಸರಾವನ್ನು ವಿರೋಧಿಸುತ್ತೇವೆ. ರಾಜ್ಯದಲ್ಲಿ ಮಹಿಷ ದಸರಾ ಆಚರಣೆ ಆಗಬಾರದು. ಸರ್ಕಾರ ಮಹಿಷ ದಸರಾಗೆ ನಿರ್ಬಂಧ ಹಾಕಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಗಾಜಾದಲ್ಲಿ ಇಸ್ರೇಲ್ ರಾಕೆಟ್ ಸುರಿಮಳೆ: ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಜನರ ವಲಸೆ

ವಿದ್ಯುತ್​ ಅಭಾವ- ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದೇನು?: ಸೋಮವಾರ ಸಂಜೆ ಮಾತನಾಡಿದ್ದ ಸಚಿವ ಸತೀಶ್​​ ಜಾರಕಿಹೊಳಿ, ರಾಜ್ಯದಲ್ಲಿ ವಿದ್ಯುತ್​ ಅಭಾವ ಆಗಿದೆ. ಕೇಂದ್ರ ಸರ್ಕಾರದಿಂದ ಬರುವ ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ಈ ಸಮಸ್ಯೆ ತಲೆದೋರಿದೆ. ನೀರಿನ ಅಭಾವದಿಂದಲೂ ವಿದ್ಯುತ್ ತಯಾರಿಕೆ ಆಗುತ್ತಿಲ್ಲ. ಕೆಲವೆಡೆ ವಿದ್ಯುತ್ ತಯಾರಿಕಾ ಘಟಕಗಳು ರಿಪೇರಿಗೆ ಬಂದಿದ್ದು ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದೆ ಎಂದು ಕಾರಣ ಕೊಟ್ಟಿದ್ದರು.

ಇದನ್ನೂ ಓದಿ:ಇಸ್ರೇಲ್‌ ವೃದ್ಧೆಯನ್ನು ಬರ್ಬರವಾಗಿ ಕೊಂದು ಫೇಸ್​ಬುಕ್​ಗೆ ವಿಡಿಯೋ ಅಪ್ಲೋಡ್; ಹಮಾಸ್​ ಉಗ್ರರ ಪೈಶಾಚಿಕ ಕೃತ್ಯ

ABOUT THE AUTHOR

...view details