ಕರ್ನಾಟಕ

karnataka

ETV Bharat / state

ಬಿಜೆಪಿಯತ್ತ ಸಂಸದೆ ಸುಮಲತಾ?: ಎಸ್ಎಂ ಕೃಷ್ಣ ಭೇಟಿಯಾದ ಸಂಸದೆ ಸುಮಲತಾ - ಈಟಿವಿ ಭಾರತ ಕನ್ನಡ

ಸಂಸದೆ ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿರುವ ಮಧ್ಯೆಯೇ ಇಂದು ಸುಮಲತಾ ಮಾಜಿ ಸಿಎಂ ಎಸ್​​ಎಂ ಕೃಷ್ಣರನ್ನು ಭೇಟಿ ಮಾಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸುಮಲತಾ ಅಂಬರೀಷ್​
ಸುಮಲತಾ ಅಂಬರೀಷ್​

By

Published : Mar 4, 2023, 4:25 PM IST

Updated : Mar 4, 2023, 4:55 PM IST

ಬಿಜೆಪಿ ಸೇರುವ ಬಗ್ಗೆ ಸಂಸದೆ ಸುಮಲತಾ ಹೇಳಿಕೆ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಆ ಮೂಲಕ ಸಂಸದೆ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಹಿರಿಯ ಮುಖಂಡರಿಂದ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಮನೆಗೆ ತೆರಳಿ ಸುಮಲತಾ ತುಸು ಹೊತ್ತು ಚರ್ಚೆ ನಡೆಸಿದ್ದಾರೆ. ಈಗಾಗಲೇ ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿದ್ದ ಎಸ್.ಎಂ.ಕೃಷ್ಣರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಭೇಟಿ ಬಳಿಕ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರು, ಟಾಲೆಸ್ಟ್ ಲೀಡರ್​. ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಂದಿದೆ. ನಾನು ಅವರನ್ನು ಭೇಟಿ ಮಾಡಿರಲಿಲ್ಲ. ಇವತ್ತು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ ಎಂದು ತಿಳಿಸಿದರು. ಬಿಜೆಪಿ ಸೇರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಇವತ್ತು ಮಂಡ್ಯದಿಂದ ಹಲವರು ಬಂದಿದಾರೆ. ಇವತ್ತು ಎಲ್ಲರ ಜತೆ ಚರ್ಚೆ ಮಾಡ್ತೇನೆ.

ನಾನು ಯಾವುದೇ ತೀರ್ಮಾನ ಇನ್ನೂ ಮಾಡಿಲ್ಲ. ಇನ್ನೂ ಹಲವರ ಜತೆ, ವರಿಷ್ಠರ ಜತೆ ಚರ್ಚೆ ಮಾಡಬೇಕು. ನನ್ನ ಲಾಭ ನಷ್ಟ ನೋಡಿ ನಿರ್ಧಾರ ಮಾಡಲ್ಲ. ನನ್ನ ಜತೆ ಇರುವವರ ಬಗ್ಗೆಯೂ ನೋಡಿಕೊಂಡೇ ನಿರ್ಧಾರ ಮಾಡಬೇಕಿದೆ ಎಂದರು. ನನಗೆ ಲೋಕಸಭೆ ಅಥವಾ ವಿಧಾನಸಭೆ ಆಸಕ್ತಿಯೋ ಅನ್ನೋದನ್ನು ಹೇಳಲ್ಲ. ಆದರೆ, ನನ್ನ ಜೊತೆಗೆ ಇದ್ದವರ ಬಗ್ಗೆ ಯೋಚನೆ ಮಾಡಬೇಕಿದೆ. ಪರಿಸ್ಥಿತಿ ಕೂಡ ನಮಗೆ ಪೂರಕ ಆಗಿರಬೇಕು ಎಂದರು. ವಿಧಾನಸಭಾ ಚುನಾವಣೆಗೆ ಮುನ್ನವೇ ನಿರ್ಧಾರ ಆಗಲಿದೆಯಾ ಅನ್ನೋ ಬಗ್ಗೆ ಸ್ಪಷ್ಟನೆ ನೀಡಲು ಸುಮಲತಾ ನಿರಾಕರಿಸಿದರು.

ಜೆಪಿ ನಗರ ನಿವಾಸದಲ್ಲಿ ಸಭೆ:ಇಂದು ಸಂಜೆ ಸಂಸದೆ ಸುಮಲತಾ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಲಿದ್ದಾರೆ. ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಅಭಿಪ್ರಾಯ ಪಡೆದು ಬಿಜೆಪಿ ಸೇರುವ ಬಗ್ಗೆ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಬೆಂಬಲಿಗರ ಜತೆಗಿನ ಸಭೆಗೂ ಮುನ್ನ ಎಸ್​​ಎಂಕೆ ಭೇಟಿ ಮಾಡಿದ ಸುಮಲತಾ, ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಈಗಾಗಲೇ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಸಭೆಯಲ್ಲಿ ಬೆಂಬಲಿಗರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಿದ್ದಾರೆ.

ಬಿಜೆಪಿ ಸಭೆಯಲ್ಲಿ ಕಾಣಿಸಿಕೊಂಡಿದ್ದ ಸಂಸದೆ:ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ನಿನ್ನೆ ಜಿಲ್ಲೆಯಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದು, ಅವರ ಬಿಜೆಪಿ ಸೇರುವ ಸಾಧ್ಯತೆಯನ್ನು ಹೆಚ್ಚಿಸಿತ್ತು. ಮಾ.12 ರಂದು ಬೆಂಗಳೂರು - ಮೈಸೂರು ನೂತನ ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಬಿಜೆಪಿ ಮುಖಂಡರ ಸಭೆ ಏರ್ಪಡಿಸಲಾಗಿತ್ತು. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಉದ್ಘಾಟನಾ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಡೆದ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,‌ ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಆಗಮಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ ಸುಮಲತಾ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡರು.‌ ಈ ವೇಳೆ ಕೇಸರಿ ಟವಲ್ ನೀಡಿ ಸುಮಲತಾ ಅವರನ್ನು ಸಭೆಗೆ ಸ್ವಾಗತಿಸಲಾಯಿತು. ಆದರೆ ಕೇಸರಿ ಟವಲ್ ಧರಿಸಿದೆ ಕೈಯಲ್ಲೇ ಹಿಡಿದು ಕುಳಿತಿದ್ದರು. ಮಾ.12ಕ್ಕೆ ಪ್ರಧಾನಿ ಮೋದಿ ಸಮಾವೇಶದಲ್ಲಿ ಸಂಸದೆ ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮಾ.12ಕ್ಕೆ ಮಂಡ್ಯಗೆ ಪ್ರಧಾನಿ ಮೋದಿ ಭೇಟಿ: ಪಕ್ಷದ ಮುಖಂಡರು, ಅಧಿಕಾರಿಗಳೊಂದಿಗೆ ಸಚಿವ ಪ್ರಹ್ಲಾದ್ ಜೋಶಿ ಪೂರ್ವಭಾವಿ ಸಭೆ

Last Updated : Mar 4, 2023, 4:55 PM IST

ABOUT THE AUTHOR

...view details