ಬೆಂಗಳೂರು:ಆರೋಗ್ಯ ಇಲಾಖೆಯ ಹೊಣೆಯನ್ನು ಸಿಎಂ ನನಗೆ ನೀಡಿದ್ದು, ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಹೊಣೆ ವಹಿಸಿಕೊಂಡ ಬಳಿಕ ಮೊದಲಿಗೆ ವಿಜಯನಗರ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಸಚಿವ ಸುಧಾಕರ್, ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿದ ಸುಧಾಕರ್ ಬಳಿಕ ಮಾತನಾಡಿದ ಅವರು, ನಾನು ಆರೋಗ್ಯ ಇಲಾಖೆಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡ್ತೇನೆ. ಸಿಎಂ ನನಗೆ ಆರೋಗ್ಯ ಇಲಾಖೆಯ ಹೊಣೆಯನ್ನೂ ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಹೊಂದಿಕೊಂಡಿದ್ದವು. ಕಾರಣಾಂತರಗಳಿಂದ 2013ರಲ್ಲಿ ಈ ಇಲಾಖೆ ಬೇರ್ಪಟ್ಟಿತ್ತು. ಈಗ ಯಡಿಯೂರಪ್ಪನವರು ಮತ್ತೆ ಅದನ್ನು ಒಟ್ಟಿಗೆ ಸೇರಿಸಿದ್ದಾರೆ. ಶ್ರೀರಾಮುಲು ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ರಾಮುಲು ಜೊತೆ ಇಂದು ಮತ್ತೆ ಸಮಾಲೋಚನೆ ಮಾಡ್ತೇನೆ. ಇಬ್ಬರೂ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದರು.
ನಿರ್ಮಲಾನಂದ ಸ್ವಾಮೀಜಿ ಭೇಟಿ ಮಾಡಿದ ಸುಧಾಕರ್ ಖಾತೆ ಬದಲಾವಣೆಯಿಂದ ಶ್ರೀರಾಮುಲು ಅವರಿಗೆ ಯಾವುದೇ ಅತೃಪ್ತಿ ಇಲ್ಲ. ಅವರು ದೊಡ್ಡ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯನ್ನು ಮೊದಲಿನಿಂದಲೂ ಅಪೇಕ್ಷಿಸಿದ್ದರು ಎಂದು ಇದೇ ವೇಳೆ ತಿಳಿಸಿದರು. ಕೋವಿಡ್ ನಿಯಂತ್ರಣಕ್ಕೆ ತರೋದು, ಸಾವಿನ ಪ್ರಮಾಣ ಕಡಿಮೆ ಮಾಡೋದು, ಮಾರ್ಗಸೂಚಿ ಕ್ರಮ ಅನುಸರಿಸಿ ಕೋವಿಡ್ ಕಂಟ್ರೋಲ್ ಮಾಡೋದು ನನ್ನ ಮೊದಲ ಆದ್ಯತೆಯಾಗಿದೆ. ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ. ಆದ್ರೆ ನಾನು ಖಾತೆ ವಹಿಸಿಕೊಂಡ ಬಳಿಕ ಈ ಬಗ್ಗೆ ಪರಾಮರ್ಶೆ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.
ಮುನಿರತ್ನಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. 15 ಜನಕ್ಕೆ ಟಿಕೆಟ್ ನೀಡಿದ್ದಾರೆ. ಮುನಿರತ್ನಗೂ ಟಿಕೆಟ್ ನೀಡಲಿದ್ದಾರೆ. ಆ ಬಗ್ಗೆ ನಿನ್ನೆ ನಾವು ಹಿರಿಯರೊಂದಿಗೆ ಸಮಾಲೋಚನೆ ಮಾಡಿದ್ದೇವೆ ಎಂದರು.