ಬೆಂಗಳೂರು :ಆರ್.ಆರ್.ನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಇಂದು ಬೆಳಗ್ಗೆ ( ಬುಧವಾರ) ನಾಮಪತ್ರ ಸಲ್ಲಿಸಲಿದ್ದಾರೆ.
ಅದಕ್ಕೂ ಮುನ್ನ ಬಿಜೆಪಿ ನಗರ ಕಾರ್ಯಾಲಯ ಬಾಬುರಾವ್ ದೇಶಪಾಂಡೆ ಭವನದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಆರ್. ಅಶೋಕ್, ಅರವಿಂದ ಲಿಂಬಾವಳಿ, ಅಭ್ಯರ್ಥಿ ಮುನಿರತ್ನ ಹಾಗೂ ಬಿಜೆಪಿ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.
ಬಳಿಕ ಬೆಳಗ್ಗೆ 10.30 ಕ್ಕೆ ಆರ್.ಆರ್. ನಗರ ಬಿಬಿಎಂಪಿ ಕಚೇರಿಯಲ್ಲಿ ಮುನಿರತ್ನ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಆರ್.ಅಶೋಕ್, ಅರವಿಂದ ಲಿಂಬಾವಳಿ ಭಾಗವಹಿಸಲಿದ್ದಾರೆ.
ತಾಜ್ ಹೊಟೇಲ್ ನಲ್ಲಿ ಸಿಎಂ ಸಭೆ :ತಾಜ್ ಹೊಟೇಲ್ನಲ್ಲಿ ಸಿಎಂ ಬಿಎಸ್ ವೈ ಹಾಗೂ ಅವರ ಆಪ್ತ ಸಚಿವರ ಜೊತೆ ಇಂದು ಮಧ್ಯಾಹ್ನದ ಮುನಿರತ್ನ ಭೋಜನ ಸೇವಿಸಿದರು. ಈ ವೇಳೆ, ಆರ್.ಆರ್.ನಗರ ಉಪಸಮರದ ರಣತಂತ್ರದ ಬಗ್ಗೆ ಚರ್ಚೆ ನಡೆಯಿತು.
ಸುಪ್ರೀಂಕೋರ್ಟ್ ಕಂಟಕ ನಿವಾರಣೆಯಾಗುತ್ತಿದ್ದ ಹಾಗೆ, ಮುನಿರತ್ನ ನೇರವಾಗಿ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಬಳಿಕ ಸಿಎಂ ಬಿಎಸ್ವೈ ಊಟಕ್ಕಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಿದರು. ಸಿಎಂ ಜೊತೆಗೆ ಸಚಿವರಾದ ಸೋಮಣ್ಣ, ಆರ್.ಅಶೋಕ್ ಹಾಗೂ ಬಸವರಾಜ್ ಬೊಮ್ಮಾಯಿ ಇದ್ದರು.
ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ :
ಕೋರ್ಟ್ ತೀರ್ಪಿಗೆ ನಾವು ತಲೆಬಾಗಲೇಬೇಕು. ವರಿಷ್ಠರು ಏನು ಸೂಚನೆ ಕೊಡ್ತಾರೋ ಅದರಂತೆ ನಡೆಯುತ್ತೇನೆ ಎಂದು ಆರ್.ಆರ್.ನಗರ ಟಿಕೆಟ್ ಆಕಾಂಕ್ಷಿ ತುಳಸಿ ಮುನಿರಾಜು ತಿಳಿಸಿದರು.
ಮಲ್ಲೇಶ್ವರಂನಲ್ಲಿ ಮಾತನಾಡಿದ ಅವರು, ಮುಂದೆ ಏನು ಮಾಡಬೇಕು ಎಂದು ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇನೆ. ಚುನಾವಣೆಗೆ ಏನೇನು ಮಾಡಬೇಕು ಎಂದು ಹೇಳಿದ್ದಾರೆ. ವರಿಷ್ಠರು ಏನು ಹೇಳ್ತಾರೋ ನೋಡೋಣ. ಟಿಕೆಟ್ ವಿಚಾರದಲ್ಲಿ ಏನೂ ಗೊಂದಲ ಇಲ್ಲ. ಗೊಂದಲದ ಯಾವುದೇ ವಾತಾವರಣ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ನಿರ್ಧಾರಕ್ಕೆ ನಾವೆಲ್ಲಾ ತಲೆ ಬಾಗಲೇಬೇಕು. ನಾವು ಒಂದೇ ಪಕ್ಷದಲ್ಲಿ ಇದ್ದೇವೆ. ಪಕ್ಷ ಗೆಲ್ಲಬೇಕು, ಅದಕ್ಕೆ ಏನು ಮಾಡಬೇಕೋ ಆ ಎಲ್ಲ ಕೆಲಸ ನಾನು ಮಾಡುತ್ತೇನೆ ಎಂದು ತಿಳಿಸಿದರು.