ಕರ್ನಾಟಕ

karnataka

ETV Bharat / state

ಪೂರ್ವ ಸಿದ್ಧತಾ ಹಂತದಲ್ಲಿ ಸಬ್-ಅರ್ಬನ್ ರೈಲು ಕಾಮಗಾರಿ: ಮೋದಿ ಅಡಿಪಾಯ ಹಾಕಿದ್ರೂ ಮುಟ್ಟದ ಚುರುಕು - Etv bharat kannada

ಜೂನ್​ನಲ್ಲಿ ಬೆಂಗಳೂರಿಗೆ ಆಗಮಿಸಿ ಪ್ರಧಾನಿ ಮೋದಿ ಬಹುನಿರೀಕ್ಷಿತ ಉಪನಗರ ರೈಲು ಯೋಜನೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇನ್ನೇನು ಪ್ರಧಾನಿಯೇ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಯೋಜನೆ ಅನುಷ್ಠಾನ ಚುರುಕುಗೊಳ್ಳಲಿದೆ ಎಂಬುದು ಎಲ್ಲರ ವಿಶ್ವಾಸವಾಗಿತ್ತು. ಆದರೆ, ಪ್ರಧಾನಿ ಅಡಿಪಾಯ ಹಾಕಿದ ಬಳಿಕವೂ ಯೋಜನೆ ಕಾಮಗಾರಿ ನಿಂತಲ್ಲೇ ನಿಂತಿದೆ.

Sub urban rail works in pre preparatory phase
ಮೋದಿ ಅಡಿಪಾಯ ಹಾಕಿದ್ರೂ ಮುಟ್ಟದ ಚುರುಕು

By

Published : Aug 7, 2022, 3:41 PM IST

ಬೆಂಗಳೂರು: ಉಪನಗರ ರೈಲು ಯೋಜನೆ ಬೆಂಗಳೂರಿಗರ ಮೂರು ದಶಕಗಳ ಕನಸಾಗಿತ್ತು. ಹಲವು ಡೆಡ್​ಲೈನ್​ಗಳ ಬಳಿಕನೂ ಬಹುನಿರೀಕ್ಷಿತ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಮೊನ್ನೆ ಜೂನ್​ನಲ್ಲಿ ಪ್ರಧಾನಿ ಮೋದಿ ಆಗಮಿಸಿ ಉಪನಗರ ರೈಲು ಯೋಜನೆ ಕಾಮಗಾರಿಗೆ ಅಡಿಪಾಯ ಹಾಕಿದರು. ಪ್ರಧಾನಿ ಅಡಿಪಾಯ ಹಾಕಿದ ಬಳಿಕ ಯೋಜನೆಗೆ ಅಗತ್ಯ ವೇಗ ಸಿಗುವುದು ಖಚಿತ ಎಂಬುದು ಬೆಂಗಳೂರಿಗರ ನಂಬಿಕೆ ಆಗಿತ್ತು.

ಆದರೆ, ಆ ನಂಬಿಕೆ ಈಗ ಹುಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಪ್ರಧಾನಿ ಅಡಿಪಾಯ ಹಾಕಿದ ಬಳಿಕವೂ ಯೋಜನೆ ಕಾಮಗಾರಿ ಇನ್ನೂ ನಿಂತಲ್ಲೇ ನಿಂತಿದೆ. 40 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂಬ ಪ್ರಧಾನಿ ಭರವಸೆ ಈಡೇರುವುದು ಬಹುತೇಕ ಅನುಮಾನವಾಗಿದೆ. ಯಾಕೆಂದರೆ ಯೋಜನೆ ಹೊಣೆ ಹೊತ್ತಿರುವ ಕೆ-ರೈಡ್ ಯೋಜನೆ ಅನುಷ್ಠಾನಕ್ಕೆ ಚುರುಕು ಮುಟ್ಟಿಸುವಲ್ಲಿ ವಿಫಲವಾಗಿದೆ.

ಆಗದ ಕಾಮಗಾರಿ ಕಾರ್ಯಾದೇಶ: 25.01 ಕಿ.ಮೀ ಉದ್ದದ ಬೈಯ್ಯಪ್ಪನಹಳ್ಳಿ- ಚಿಕ್ಕಬಾಣಾವರ ಕಾರಿಡಾರ್-2 ಕಾಮಗಾರಿ ಬಹುತೇಕ ಆರಂಭವಾಗುವ ಹಂತದಲ್ಲಿತ್ತು. ಆದರೆ, ಪ್ರಧಾನಿ ಬಂದು ಹೋದ ಬಳಿಕನೂ ಉಪನಗರ ರೈಲು ಯೋಜನೆಯ ಈ ಕಾರಿಡಾರ್-2 ಕಾಮಗಾರಿಗೆ ಇನ್ನೂ ಕಾರ್ಯಾದೇಶ ಹೊರಡಿಸಲು ಸಾಧ್ಯವಾಗಿಲ್ಲ.

ನಾಲ್ಕು ಕಾರಿಡಾರ್​ಗಳ ಪೈಕಿ ಈ ಕಾರಿಡಾರ್​ನ ಸಿವಿಲ್ ಕಾಮಗಾರಿ ಆರಂಭವಾಗುವ ಹಂತದಲ್ಲಿ ಇತ್ತು. ಕನಿಷ್ಠ ಬಿಡ್ ದಾರ L&T Co. ಕಾಮಗಾರಿ ಟೆಂಡರ್ ನೀಡಲಾಗಿತ್ತು. ಈ ಸಂಬಂಧ ಕಾರ್ಯಾದೇಶ ಹೊರಡಿಸುವುದೊಂದು ಬಾಕಿ ಇತ್ತು. ಆದರೆ, ಪ್ರಧಾನಿ ಅಡಿಪಾಯ ಹಾಕಿ ಒಂದೂವರೆ ತಿಂಗಳು ಕಳೆಯುತ್ತ ಬಂದರೂ, ಇನ್ನೂ ಸಿವಿಲ್ ಕಾಮಗಾರಿಯ ಕಾರ್ಯಾದೇಶ ಸಹ ಹೊರಡಿಸಿಲ್ಲ.

ಕೆ-ರೈಡ್​ ಮೀನಾಮೇಷ: ಟೆಂಡರ್ ಪ್ರಕ್ರಿಯೆ ಎಲ್ಲಾ ಮುಗಿದರೂ ಎಲ್​ಅಂಡ್​ಟಿಗೆ ಸಿವಿಲ್ ಕಾಮಗಾರಿಯ ಕಾರ್ಯಾದೇಶ ನೀಡಲು ಕೆ-ರೈಡ್ ಮೀನಾಮೇಷ ನೋಡುತ್ತಿದೆ. ಶೀಘ್ರದಲ್ಲಿ ಕಾರ್ಯಾದೇಶ ಹೊರಡಿಸಲಾಗುತ್ತೆ ಎನ್ನುತ್ತಿದ್ದರೂ, ವಾಸ್ತವದಲ್ಲಿ ಸದ್ಯಕ್ಕೆ ಆದೇಶ ಹೊರ ಬೀಳುವ ಲಕ್ಷಣ ಕಾಣುತ್ತಿಲ್ಲ. ಕಾರ್ಯಾದೇಶ ಅಂತಿಮ ಹಂತದ ಪ್ರಕ್ರಿಯೆಯಲ್ಲಿದ್ದು, ಶೀಘ್ರ ಆದೇಶ ಹೊರಡಿಸಲಾಗುತ್ತದೆ ಎಂದು ಕೆ-ರೈಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತರೆ ಕಾರಿಡಾರ್​ಗಳಿಗೂ ಮುಟ್ಟದ ಚುರುಕು:148 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್​ಗಳ 15,767 ಕೋಟಿ ಅಂದಾಜು ವೆಚ್ಚದ ಈ ಯೋಜನೆ ಬೆಂಗಳೂರಿಗರ ಸುಮಾರು 30 ವರ್ಷಗಳ ಕನಸಾಗಿದೆ. ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನ್ ಮೆಂಟ್ (35.52 ಕಿ.ಮೀ.) ಮತ್ತು ಹೀಲಲಿಗೆ-ರಾಜನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್ ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರದ ಕಾರಿಡಾರ್ ಬಿಟ್ಟರೆ ಮಿಕ್ಕ ಮೂರು ಕಾರಿಡಾರ್​ಗಳ ಅನುಷ್ಠಾನ ಇನ್ನೂ ಪ್ರಾಥಮಿಕ ಪೂರ್ವ ಸಿದ್ಧತಾ ಹಂತದಲ್ಲೇ ಇದೆ. ಕಾರಿಡಾರ್​ಗಳ ಸಿವಿಲ್ ಕಾಮಗಾರಿಯ ಟೆಂಡರ್ ಕರೆಯಲು ಇನ್ನೂ ವರ್ಷಗಳೇ ಬೇಕಾಗಲಿವೆ. ಹಾಗಾಗಿ ಯೋಜನೆ ಪ್ರಧಾನಿ ಹೇಳಿರುವ 40 ತಿಂಗಳ ಡೆಡ್ ಲೈನ್ ಈಡೇರುವುದು ಅನುಮಾನವಾಗಿದ್ದು, ಯೋಜನೆ ಪೂರ್ಣವಾಗಲು ಇನ್ನೂ ಆರೇಳು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ:ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ: ಜಿಲ್ಲಾಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಲು ಮುಂದಾದ ಸರ್ಕಾರ

41.40 ಕಿ.ಮೀ ಉದ್ದದ ಬೆಂಗಳೂರು- ದೇವನಹಳ್ಳಿ ಕಾರಿಡಾರ್-1 ಸಿವಿಲ್ ಕಾಮಗಾರಿ ಪ್ರಾರಂಭ ಇನ್ನೂ ದೂರದ ಮಾತಾಗಿದೆ. ಈ ಕಾರಿಡಾರ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ವಸಿದ್ಧತಾ ಹಂತದಲ್ಲಿದೆ. ಇತ್ತ 35.52 ಕಿ.ಮೀ ಉದ್ದದ ಕೆಂಗೇರಿ- ಕಂಟೋನ್ ಮೆಂಟ್- ವೈಟ್ ಫೀಲ್ಡ್ ಕಾರಿಡಾರ್-3 ಕತೆಯೂ ಅದೇ ಆಗಿದೆ. ಟೆಂಡರ್ ಪೂರ್ವ ಸಿದ್ಧತಾ ಹಂತದಲ್ಲೇ ಉಳಿದುಕೊಂಡಿದೆ. ಸಿವಿಲ್ ಕಾಮಗಾರಿ ಆರಂಭವಾಗಲು ವರ್ಷವೇ ಬೇಕಾಗಲಿದೆ.

ಇನ್ನು 46.24 ಕಿ.ಮೀ ಉದ್ದದ ಹೀಲಲಿಗೆ-ರಾಜನುಕುಂಟೆ ಕಾರಿಡಾರ್-4 ಸಿವಿಲ್ ಕಾಮಗಾರಿ ಆರಂಭ ಇನ್ನೂ ವಿಳಂಬವಾಗಲಿದೆ. ಕಾರಿಡಾರ್​ನ ಜಿಯೋ ತಾಂತ್ರಿಕ ಸರ್ವೆ ಪೂರ್ಣವಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಕಾರಿಡಾರ್​ನ ಟೆಂಡರ್ ಇನ್ನೂ ಪೂರ್ವಸಿದ್ಧತಾ ಹಂತದಲ್ಲಿದೆ ಎಂದು ಕೆ-ರೈಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details