ಉಳ್ಳಾಲ (ಮಂಗಳೂರು): ಸ್ನೇಹಿತೆ ಜೊತೆಗೆ ವಿಹಾರಕ್ಕೆ ಬಂದಿದ್ದ ಯುವತಿ ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆಯಲ್ಲಿ ಬುಧವಾರ ನಡೆದಿದೆ. ಮಂಗಳೂರಲ್ಲಿ ಬಿಕಾಂ ಓದುತ್ತಿರುವ, ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತೆಗ್ಗಿ ಗ್ರಾಮದ ನಿವಾಸಿ ಕಾವೇರಿ(20)ಮೃತ ಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಕಾವೇರಿ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇಂದು ತನ್ನ ಬಾಲ್ಯ ಸ್ನೇಹಿತೆ ಕಾವೇರಿಯೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಸಮುದ್ರ ತೀರಕ್ಕೆ ವಿಹಾರಕ್ಕೆ ಹೋಗಿದ್ದರು.
ಸ್ನೇಹಿತೆಯರಿಬ್ಬರು ಸಮುದ್ರ ತೀರದ ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಾವೇರಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಈಜು ರಕ್ಷಕ ಸಿಬ್ಬಂದಿ ಮೋಹನ್ ಚಂದ್ರ, ಸ್ಥಳೀಯ ಮೀನುಗಾರರಾದ ಯೋಗೀಶ್, ಪ್ರವೀಣ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ್ ಮತ್ತು ಸ್ಥಳೀಯರು ಸೇರಿ ಸಮುದ್ರದಲ್ಲಿ ಈಜಾಡಿ ಕಾವೇರಿಯನ್ನು ದಡಕ್ಕೆ ಎಳೆ ತಂದರೂ ಅಷ್ಟರಲ್ಲಿ ಕಾವೇರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಕಾವೇರಿ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಮಂಗಳೂರಿನ ಉರ್ವ ಸ್ಟೋರ್ನಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದಾರೆ. ವಿದ್ಯಾರ್ಥಿನಿ ಮಂಗಳೂರು ನಗರದ ಸ್ವಸ್ಥಿಕ್ ಕಾಲೇಜನಲ್ಲಿ ಬಿಕಾಂ ವ್ಯಾಸಂಗದ ಜೊತೆಗೆ ಸಿಎ ಅಧ್ಯಯನ ನಡೆಸುತ್ತಿದ್ದರು. ಮೃತ ಕಾವೇರಿ ಜೊತೆ ಬಂದಿದ್ದ ಬಾಲ್ಯ ಸ್ನೇಹಿತೆ ಕಾವೇರಿಯೂ ಕೂಡ ಮಂಗಳೂರು ನಗರದ ಕಾಲೇಜೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಇನ್ನು ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಮೃತ ಕಾವೇರಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.