ಬೆಂಗಳೂರು: ಕಬ್ಬಿಗೆ ರಾಜ್ಯ ಸಲಹಾ ಬೆಲೆಯನ್ನು ಘೋಷಣೆ ಮಾಡುವಂತೆ ಕಬ್ಬು ಬೆಳೆಗಾರರು ಇಂದು ಆಗ್ರಹಿಸಿದರು. ವಿಧಾನಸೌಧದಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಜೊತೆ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟರು. ತೂಕದಲ್ಲಿನ ವ್ಯತ್ಯಾಸ ಸರಿಪಡಿಸಿ, ಕಟಾವು ಮತ್ತು ಸಾಗಾಟ ದರಕ್ಕೆ ಮಾನದಂಡ ಹಾಕುವಂತೆ, ರಾಜ್ಯ ಸಲಹಾ ಬೆಲೆ (ಎಸ್ ಎಪಿ) ಘೋಷಣೆ ಮಾಡುವಂತೆ ಮತ್ತು ಕಬ್ಬು ಉಪ ಉತ್ಪನ್ನಗಳಿಂದ ಪ್ರಮುಖವಾಗಿ ಎಥೆನಾಲ್ ನಿಂದ ಕಾರ್ಖಾನೆಗಳಿಗೆ ಬರುವ ಲಾಭವನ್ನು ರೈತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಕಟಾವು ಮತ್ತು ಸಾಗಾಟ ದರ ಸಂಬಂಧ ಮಾರ್ಗಸೂಚಿ ಹೊರಡಿಸಬೇಕು. ರೈತರನ್ನು ಸುಲಿಗೆ ಮಾಡುವುದನ್ನು ತಪ್ಪಿಸಲು ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. 12 ತಿಂಗಳಿಗೆ ಕಟಾವು ಮಾಡಬೇಕಾದ ಕಬ್ಬನ್ನು ವಿಳಂಬವಾಗಿ ಕಟಾವು ಮಾಡಲಾಗುತ್ತಿದೆ. ಇದರಿಂದ ರೈತ ಬಡ್ಡಿ ಕಟ್ಟಬೇಕಾಗುವ ಸ್ಥಿತಿ ಬಂದಿದೆ. ಹೀಗಾಗಿ ಕಾರ್ಖಾನೆಗಳಿಂದ ವಿಳಂಬ ಕಟಾವಿಗೆ 200 ರಿಂದ 300 ರೂ. ಪ್ರತಿ ಕ್ವಿಂಟಾಲ್ಗೆ ನೀಡಬೇಕು. 14 ದಿನದಲ್ಲಿ ಪಾವತಿ ಮಾಡಬೇಕು. ಇಲ್ಲವಾದರೆ ಶೇ 15 ಬಡ್ಡಿ ಕೊಡಬೇಕು ಎಂಬ ನಿಯಮ ಇದೆ. ಆದರೆ ಅದನ್ನು ಪಾಲನೆ ಮಾಡುತ್ತಿಲ್ಲ. ಸಚಿವರು, ಸಿಎಂ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಎಥೆನಾಲ್ ನಿಂದ 38 ಕಾರ್ಖಾನೆಗಳು ಲಾಭ ಪಡೆಯುತ್ತಿವೆ. ಅದರ ಲಾಭ ರೈತರಿಗೆ ಸಿಗಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಗಳು ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುತ್ತಿವೆ. ಮುಂಚೆ ಶೇ 11 ಸಕ್ಕರೆ ಇಳುವರಿ ದರ ಇರುತ್ತಿತ್ತು. ಈಗ ಶೇ 8 ರಿಂದ 9 ತೋರಿಸುತ್ತಿದ್ದಾರೆ. ಇದರಿಂದ ಕಾರ್ಖಾನೆಗಳು ಲಾಭ ಮಾಡುತ್ತಿವೆ ಎಂದರು.
ಸಕ್ಕರೆ ಇಳುವರಿ ಪ್ರಮಾಣ ಆಧಾರದಲ್ಲಿ ಬೆಲೆ ನಿಗದಿ ಮಾಡಬೇಡಿ: ಸಕ್ಕರೆ ಇಳುವರಿ ಪ್ರಮಾಣವನ್ನು ಕೇಂದ್ರ ಸರ್ಕಾರ ಶೇ 10.25ಕ್ಕೆ ಏರಿಕೆ ಮಾಡಿದೆ. ಶೇ 8.5 ರಿಂದ ಶೇ 9ಕ್ಕೆ ಇಳುವರಿ ಪ್ರಮಾಣ ಕಡಿಮೆ ಮಾಡಬೇಕು. ಪಾವತಿ ವಿಳಂಬ ಆಗುತ್ತಿದೆ. ಎಫ್ಆರ್ಪಿ ದರಗಿಂತ ಹೆಚ್ಚಿನ ದರ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಸಕ್ಕರೆ ಅಂಶವನ್ನು ಪರಿಗಣಿಸಿ FRP ನಿಗದಿ ಮಾಡಬೇಕು. ಈ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದರು.
ಮಂತ್ರಿಗಳದ್ದೇ ಕಾರ್ಖಾನೆಗಳಿವೆ: ಇದೇ ವೇಳೆ ಮಾತನಾಡಿದ ಮೇಲುಕೋಟೆ ಕಬ್ಬು ಬೆಳೆಗಾರ ಕೃಷ್ಣೇಗೌಡ, ಮಂತ್ರಿಗಳ ಸಕ್ಕರೆ ಕಾರ್ಖಾನೆಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ 54 ಸಕ್ಕರೆ ಕಾರ್ಖಾನೆಗಳಿವೆ. ನಿಮ್ಮ ಸರ್ಕಾರದ ಮಂತ್ರಿಗಳೇ ಕಾರ್ಖಾನೆ ನಡೆಸುತ್ತಿದ್ದಾರೆ. ಪ್ರಬಲ ರಾಜಕಾರಣಿಗಳ ಕಾರ್ಖಾನೆಗಳಲ್ಲಿ ಬಿಲ್ ಬಾಕಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಕ್ಕರೆ ಸಚಿವರು ಬದಲಾಗುತ್ತಿದ್ದಾರೆ. ನಮಗೆ ಯಾರು ಮಂತ್ರಿಗಳು ಅನ್ನೋ ಗೊಂದಲ ಇದೆ. ನೀವು 8ನೇ ಸಕ್ಕರೆ ಸಚಿವರಾಗಿದ್ದೀರ. ನಮಗೆ ಇದರಿಂದ ಯಾರು ಸಕ್ಕರೆ ಸಚಿವರು ಎಂಬ ಗೊಂದಲ ಇದೆ. ನೀವು ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳು ಆದೇಶ ಪಾಲಿಸಲಿ: ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕಾರ್ಖಾನೆಗಳಿಗೆ ಯಾವ ರಿಯಾಯಿತಿ ಕೊಡುತ್ತೀರಿ ಅದನ್ನು ಕೊಡಿ. ಆದರೆ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶ ಪಾಲಿಸುವಂತೆ ಮಾಡಿ. ಸಕ್ಕರೆ ಇಳುವರಿ ಪ್ರಮಾಣ ಆಧರಿಸಿ ದರ ನಿಗದಿ ಮಾಡುವುದು ಬೇಡ. 2009, 2010ರಲ್ಲಿ ಶೇ 14 ಇಳುವರಿ ಬರುತ್ತಿತ್ತು. ಈಗ ಶೇ 8 ರಿಂದ 9 ಇಳುವರಿ ಬರುತ್ತಿದೆ. ಇದಕ್ಕೆ ರೈತರು ಕಾರಣನಾ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ FRP ದರ ನಿಗದಿ ಮಾಡಿದೆ. ರಾಜ್ಯ ಸಲಹಾ ಬೆಲೆಯನ್ನು (ಎಸ್ಎಪಿ) ನಾವು ಕೇಳುತ್ತಿದ್ದೇವೆ. ನಷ್ಟ ಭರ್ತಿಗೆ ಎಸ್ಎಪಿಯನ್ನು ಸರ್ಕಾರ ಕೊಡಬೇಕು. ಪ್ರತಿ ಟನ್ ಕಬ್ಬಿಗೆ 3,550 ರೂ. FRP ಇದೆ. ಅದರ ಮೇಲೆ ಎಷ್ಟು ದರ ನಿಗದಿ ಮಾಡಬಹುದು? ಎಚ್ ಅಂಡ್ ಟಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ನೀವೇ ಕಾರ್ಖಾನೆ ನಡೆಸಿ ನೋಡಿ:ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಪರವಾಗಿ ಜಗದೀಶ್ ಗುಡಗುಂಟಿ ಮಾತನಾಡಿ, ನೀವೇ ಸಕ್ಕರೆ ಕಾರ್ಖಾನೆ ಮಾಡಿ. ಆಗ ಸಕ್ಕರೆ ಕಾರ್ಖಾನೆಗಳ ಖರ್ಚು, ವೆಚ್ಚ ಗೊತ್ತಾಗಲಿದೆ. ನೀವೇ ಸಕ್ಕರೆ ತಜ್ಞರಿಂದ ಅಧ್ಯಯನ ನಡೆಸಿ ಆವಾಗ ನಿಮಗೆ ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು. ಕಟಾವು ಮತ್ತು ಸಾಗಾಟ ವೆಚ್ಚ ಹೆಚ್ಚಾಗಿದೆ. ಹೆಚ್ಚಿಗೆ ಸಕ್ಕರೆ, ವಿದ್ಯುತ್ ಉತ್ಪಾದನೆ ಮಾಡಿ ರೈತರಿಗೆ ಹೆಚ್ಚಿನ ದರ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ರೈತರು ಕಬ್ಬು ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು. ಅದಕ್ಕಾಗಿ ಯಂತ್ರೋಪಕರಣ ಬಳಸುವಂತೆ ಮನವಿ ಮಾಡಿದರು.
ಇದರಿಂದ ಸಿಟ್ಟಾದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ಕೂರಿಸಿ ಎಂದು ರೈತರು ಸಚಿವರನ್ನು ಆಗ್ರಹಿಸಿದರು.
ಇದನ್ನೂ ಓದಿ: ಕಬ್ಬು ಕಟಾವು, ಸಾಗಣೆ ಮಾಡಲು ಹೆಚ್ಚಿನ ಹಣ ಪೀಕುತ್ತಿರುವ ಕಾರ್ಮಿಕರು: ರೈತರು ಕಂಗಾಲು